ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯ: ಪ್ರದೀಪ್‌ ಕುಮಾರ್

Last Updated 23 ಡಿಸೆಂಬರ್ 2021, 13:44 IST
ಅಕ್ಷರ ಗಾತ್ರ

ಕೋಲಾರ: ‘ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯವಾಗಿದ್ದು, ಸಾಧನ ಸಂಪನ್ಮೂಲ ಒದಗಿಸಲು ಮುಂದಾಗಬೇಕು’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಮನವಿ ಮಾಡಿದರು.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳಲ್ಲಿ ಕಲಿಕೆಯ ಜತೆಗೆ ಸಂಸ್ಕಾರ, ಮೌಲ್ಯ ತುಂಬಲು ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ’ ಎಂದರು.

‘ದಾನಿಗಳು ಶಾಲೆಗೆ ಅಪಾರ ನೆರವು ನೀಡುತ್ತಾ ಬಂದಿದ್ದಾರೆ. ಸಮುದಾಯ ಮತ್ತು ದಾನಿಗಳು ಸಹಕಾರ ನೀಡಬೇಕು. ಪೋಷಕರು ಕನಿಷ್ಠ ತಿಂಗಳಿಗೊಮ್ಮೆ ತಮ್ಮ ಮಕ್ಕಳ ಕಲಿಕಾ ಪ್ರಗತಿ ತಿಳಿಯಲು ಶಾಲೆಗೆ ಭೇಟಿ ನೀಡಬೇಕು. ಯಾವುದೇ ಮಗು ಶಾಲೆಗೆ ಗೈರಾದರೆ ಅದೇ ದಿನ 11 ಗಂಟೆ ವೇಳೆಗೆ ದೂರವಾಣಿ ಮೂಲಕ ಪೋಷಕರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಶಾಲೆಯು ಕಲಿಕೆ ಹಾಗೂ ಉತ್ತಮ ಶಿಕ್ಷಕರನ್ನು ಹೊಂದಿದ್ದು, ಖಾಸಗಿ ಶಾಲೆಗಿಂತಲೂ ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಧ್ಯೇಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಜತೆಗೆ ಮನೆಯಲ್ಲಿ ಮಕ್ಕಳ ಕಲಿಕೆ ಬಗ್ಗೆ ಗಮನ ಹರಿಸಬೇಕು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ ಸಲಹೆ ನೀಡಿದರು.

‘ಸಮುದಾಯದತ್ತ ಶಾಲಾ ಕಾರ್ಯಕ್ರಮದ ಧ್ಯೇಯ ಉತ್ತಮವಾಗಿದೆ. ಸಮುದಾಯವನ್ನು ಶಾಲೆಯ ಅಭಿವೃದ್ಧಿಗೆ ಸೆಳೆಯುವ ಪ್ರಯತ್ನ ಇದಾಗಿದೆ’ ಎಂದು ಶಾಲೆಯ ಶಿಕ್ಷಕ ಸಚ್ಚಿದಾನಂದಮೂರ್ತಿ ವಿವರಿಸಿದರು.

ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಲೀಲಾ, ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು ಹಾಗೂ ಪೋಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT