ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗದ ದೂರು

ಅಮೃತ ಸಿಟಿ ಯೋಜನೆ ಅನುಷ್ಠಾನದಲ್ಲಿ ತೊಡಕು: ಸಂಸದ ಮುನಿಸ್ವಾಮಿ
Last Updated 5 ಡಿಸೆಂಬರ್ 2020, 3:18 IST
ಅಕ್ಷರ ಗಾತ್ರ

ಕೆಜಿಎಫ್: ‘ಕೇಂದ್ರ ಸರ್ಕಾರ ಅಮೃತ ಸಿಟಿ ಯೋಜನೆಗೆ ₹135 ಕೋಟಿ ಬಿಡುಗಡೆ ಮಾಡಿದೆ. ಆದರೆ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದೆ ಹಣ ದುರುಪಯೋಗ ಆಗಿದೆ ಎಂಬ ದೂರುಗಳು ಬಂದಿವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ರಾಬರ್ಟಸನ್ ಪೇಟೆ ನಗರಸಭೆಯ ಪ್ರಥಮ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಯೋಜನೆಯ ಮಾರ್ಗಸೂಚಿಯಂತೆ ಹಣ ಖರ್ಚಾಗಿಲ್ಲ. ಯೋಜನೆ ಬಗ್ಗೆ ನಗರಸಭೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಬೃಹತ್ ನೀರು ಹರಿದುಹೋಗಲು ನಿರ್ಮಿಸಲಾಗಿರುವ ಚರಂಡಿ ಕಾಮಗಾರಿ ಕೂಡ ಸರಿಯಲ್ಲ. ಚರಂಡಿ ಪಕ್ಕದಲ್ಲಿ ಒಂದು ವಾಹನ ಸಂಚರಿಸಲು ಬೇಕಾದ ಜಾಗವನ್ನು ಬಿಟ್ಟಿಲ್ಲ. ಫುಟ್ ಪಾತ್‌ ಮತ್ತು ಅದರ ಪಕ್ಕ ಚರಂಡಿ ಕಾಮಗಾರಿ ಕೂಡ ನಿರ್ಮಾಣವಾಗಿಲ್ಲ. ಈ ಸಂಬಂಧವಾಗಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಯನ್ನು ಮೊದಲ್ಗೊಂಡು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಮೃತ ಸಿಟಿ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದರು.

‘ಅಧಿಕಾರಿಗಳಿಗೆ ಲಂಚ ತಿನ್ನಿಸಿ, ಬಡಾವಣೆಗಳನ್ನು ಅಕ್ರಮವಾಗಿ ನಿರ್ಮಾಣ ಮಾಡುವವರು ಮೂಲ ಸೌಕರ್ಯಗಳನ್ನು ಮಾಡದೆ, ಹಣ ಮಾಡಿಕೊಂಡು ಹೋಗುತ್ತಾರೆ. ನಂತರ ಆ ಬಡಾವಣೆಗಳಲ್ಲಿ ಎಲ್ಲಾ ಸೌಲಭ್ಯ ಒದಗಿಸಿಕೊಡುವುದು ನಗರಸಭೆಗೆ ಹೊರೆಯಾಗುತ್ತದೆ. ಇಂತಹ ಕೃತ್ಯಗಳಿಗೆ ಅವಕಾಶ ಕೊಡಬಾರದು’ ಎಂದರು.

‘ಗೌಡನ ಕೆರೆಯಲ್ಲಿ ರಸ್ತೆ ಅಕ್ರಮವಾಗಿ ರಸ್ತೆ ಮಾಡಲಾಗಿದೆ. ಎಷ್ಟೇ ಪ್ರಭಾವಿಗಳು ಹೇಳಿದರೂ ಬಿಡಬೇಡಿ. ಕೆರೆಯನ್ನು ಉಳಿಸಬೇಕು. ಅದೇ ರೀತಿ ಪಾರಾಂಡಹಳ್ಳಿ ಕೆರೆಯನ್ನು ಕೂಡ ಅಭಿವೃದ್ಧಿ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಬೆಮಲ್ ಆಲದಮರದಿಂದ ಮೊದಲ್ಗೊಂಡು ಬಿಜಿಎಂಎಲ್ ಪ್ರದೇಶ ಶುರುವಾಗುತ್ತದೆ. ರಾಜ್ಯ ಸರ್ಕಾರ 3200 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣ ಮಾಡಲು ಉದ್ದೇಶಿಸಿದೆ. ಬೆಮೆಲ್‌ಗೆ ಸೇರಿದ ಪ್ರದೇಶಕ್ಕೆ ಇಲ್ಲದ ಸರ್ವೆ ನಂಬರ್ ಹಾಕಿ, ಮೂರ್ನಾಲ್ಕು ಎಕರೆ ಪ್ರದೇಶವನ್ನು ಹಲವಾರು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಕೂಡ ಯಾವುದೇ ಮುಲಾಜಿಲ್ಲದೆ ತೆರವು ಮಾಡಬೇಕು’ ಎಂದು ತಹಶೀಲ್ದಾರ್ ಸುಜಾತ ಮತ್ತು ನಗರಸಭೆ ಪೌರಾಯುಕ್ತೆ ಸರ್ವರ್ ಮರ್ಚೆಂಟ್ ಅವರಿಗೆ ಸೂಚಿಸಿದರು.

ಶಾಸಕಿ ಎಂ.ರೂಪಕಲಾ ಮಾತನಾಡಿ, ‘ನಗರಸಭೆಯ ಪ್ರಥಮ ಸಭೆ ಪ್ರತಿಜ್ಞಾ ವಿಧಿ ಸಭೆಯಾಗಿದೆ. ಅಧ್ಯಕ್ಷರ ಅಪ್ಪಣೆ ಮೇರೆಗೆ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಎಲ್ಲಾ ನಿಖರ ಮಾಹಿತಿಯನ್ನು ಸದಸ್ಯರಿಗೆ ಮೊದಲೇ ನೀಡಿ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ’ ಎಂದರು.

‘ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಗುತ್ತಿಗೆದಾರರು ಹೊರ ಪ್ರದೇಶಕ್ಕೆ ಸೇರಿದವರು. ಅವರಿಗೆ ಜವಾಬ್ದಾರಿ ಮತ್ತು ಕಾಳಜಿ ಇಲ್ಲ. ಆದ್ದರಿಂದ ಕಾಮಗಾರಿಗಳು ವಿಳಂಬವಾಗುತ್ತಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ನಗರಸಭೆಗೆ ಬಂದಿದ್ದ ಹಣವನ್ನು ಸರ್ಕಾರ ವಾಪಸ್ ಪಡೆಯುತ್ತಿದೆ. ಬೆಮಲ್‌ ಸಂಸ್ಥೆ ನಗರಸಭೆಗೆ ₹9 ಕೋಟಿ ಬಾಕಿ ಇದೆ. ಅದನ್ನು ವಸೂಲಿ ಮಾಡಬೇಕು’ ಎಂದು ಶಾಸಕಿ ತಿಳಿಸಿದರು.

ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಕಷ್ಟವಾಗುತ್ತಿದೆ. ಹೊಸ ಟೆಂಡರ್ ಪ್ರಕ್ರಿಯೆ 9ನೇ ತಾರೀಕಿನಂದು ನಡೆಯಲಿದೆ. ನಂತರ ಸಮಸ್ಯೆ ಬಗೆಹರಿಯಲಿದೆ. ಎಲ್ಲಾ ವಾರ್ಡ್‌ಗಳಿಗೂ ಸರ್ಕಾರದ ಅನುದಾನವನ್ನು ತಾರತಮ್ಯವಿಲ್ಲದೆ ಹಂಚಲಾಗುವುದು ಎಂದು ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT