ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಕಾಂಗ್ರೆಸ್‌ ದಲ್ಲಾಳಿಗಳ ಹೋರಾಟ

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ಮುನಿಸ್ವಾಮಿ ಲೇವಡಿ
Last Updated 5 ಅಕ್ಟೋಬರ್ 2020, 14:28 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರದ ಹೊಸ ಕೃಷಿ ಕಾನೂನು ವಿರೋಧಿಸಿ ಪಂಜಾಬ್‌ನಲ್ಲಿ ಹೋರಾಟ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಮುಖಂಡರಿಗೆ ಕೃಷಿಯ ಗಂಧ ಗಾಳಿಯೂ ಗೊತ್ತಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಲೇವಡಿ ಮಾಡಿದರು.

ಇಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ‘ರೈತರ ಹೆಸರೇಳಿಕೊಂಡು ಕಾಂಗ್ರೆಸ್‌ ದಲ್ಲಾಳಿಗಳು ಹೋರಾಟ ಮಾಡಿದ್ದಾರೆ. ಕಾಂಗ್ರೆಸ್‌ ಮುಖಂಡರಿಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಚಾರವಾಗಿ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜೀವ್‌ಗಾಂಧಿ ಅವರ ಪತ್ನಿ ಎಂಬುದೇ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರ ಏಕಮಾತ್ರ ಅರ್ಹತೆ. ಇನ್ನು ಸೋನಿಯಾ ಗಾಂಧಿಯವರ ಪುತ್ರ ಎಂಬುದೇ ರಾಹುಲ್‌ ಗಾಂಧಿಯ ಏಕೈಕ ಅರ್ಹತೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅಂತಹವರನ್ನು ದೇಶದ ಪ್ರಧಾನಿ ಹುದ್ದೆಯಲ್ಲಿ ಕೂರಿಸಲು ಓಡಾಡುತ್ತಿರುವ ಕಾಂಗ್ರೆಸ್‌ ಮುಖಂಡರಂತಹ ದೊಡ್ಡ ಮೂರ್ಖರು ಬೇರೆಯವರಿಲ್ಲ’ ಎಂದು ಕುಟುಕಿದರು.

‘ಚುನಾವಣೆ ವೇಳೆ ಮತದಾರರಿಗೆ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವುದು ಕಾಂಗ್ರೆಸ್‌ ಜಾಯಮಾನ. ಹಲವು ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್‌ ಮಾಡಿರುವ ತಪ್ಪುಗಳನ್ನು ಬಿಜೆಪಿ ಈಗ ಸರಿಪಡಿಸುತ್ತಿದೆ. ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ವಿಪಕ್ಷ ಸ್ಥಾನವೇ ಗಟ್ಟಿ’ ಎಂದು ವ್ಯಂಗ್ಯವಾಡಿದರು.

ಭಿನ್ನಾಭಿಪ್ರಾಯ ಮರೆಯಿರಿ: ‘ಪದಾಧಿಕಾರಿಗಳಿಗೆ ಅಧಿಕಾರ ಕೊಟ್ಟಿರುವ ಬೂತ್‌ ಮಟ್ಟದ ಕಾರ್ಯಕರ್ತರಿಗೂ ಪಕ್ಷದಲ್ಲಿ ರಾಜಕೀಯ ಅವಕಾಶ ಸಿಗಬೇಕು. ಕಾರ್ಯಕರ್ತರು ಸಹ ಮುಖಂಡರಾಗಬೇಕು. ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ವಿಸಿಟಿಂಗ್‌ ಕಾರ್ಡ್‌ಗೆ ಸೀಮಿತವಾಗಬಾರದು. ಪಕ್ಷದ ಮುಖಂಡರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಪಕ್ಷ ಸಂಘಟಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಂಸತ್‌ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಹೆಚ್ಚು ಮತ ಗಳಿಸುತ್ತಿದೆ. ಆದರೆ, ಗ್ರಾ.ಪಂ, ತಾ.ಪಂ, ಜಿ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಈ ಬಗ್ಗೆ ಪಕ್ಷದಲ್ಲಿ ಆತ್ಮಾವಲೋಕನ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಸಮರ್ಥ ನಾಯಕತ್ವ: ‘ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವವಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆಯಿದ್ದು, ಇಲ್ಲಿ ಬಿಜೆಪಿಯ ಹಲವರು ಶಾಸಕರಾಗಿದ್ದಾರೆ. ಅದೇ ರೀತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿಯಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಆಶಿಸಿದರು.

‘ಈ ಹಿಂದೆ ದೇಶ ಆಳಿದ ಕಾಂಗ್ರೆಸ್‌ಗೆ ದೂರದೃಷ್ಟಿ ಇರಲಿಲ್ಲ. ಬಿಜೆಪಿ ಆಡಳಿತದಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಇಡೀ ಜಗತ್ತು ಭಾರತದತ್ತ ತಿರುಗು ನೋಡುತ್ತಿದೆ. ಭಾರತವು ಭವಿಷ್ಯದಲ್ಲಿ ವಿಶ್ವದ ಗುರುವಿನ ಸ್ಥಾನ ಅಲಂಕರಿಸಲಿದೆ’ ಎಂದು ಹೇಳಿದರು.

ಬಿಜೆಪಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಸಹ ಪ್ರಭಾರಿ ಪುಷ್ಪಾ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿಗಳಾದ ಗುರುನಾಥರೆಡ್ಡಿ, ಸುರೇಶ್‌ ನಾರಾಯಣ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT