ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ವಿರುದ್ಧ ಬಿಜೆಪಿ ಷಡ್ಯಂತ್ರ: ಸಲೀಂ ಅಹ್ಮದ್‌

ಕೋಲಾರದಲ್ಲಿ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಸಲೀಂ ಆರೋಪ
Last Updated 1 ಏಪ್ರಿಲ್ 2023, 6:16 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂಬ ಅನುಮಾನ ಉಂಟಾಗುತ್ತಿದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದ ಪ್ರಧಾನಿ ಈಗ ರಾವಣ ರಾಜ್ಯ ಮಾಡಿದ್ದಾರೆ. ಸ್ವರ್ಗ ತೋರಿಸುವುದಾಗಿ ಹೇಳಿ ನರಕ ತೋರಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮೇಲೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಮುಖಂಡರು ಯಾವತ್ತೂ ದೂರು ನೀಡಿಲ್ಲ’ ಎಂದರು.

‘ರಾಹುಲ್‌ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್‌ ಹೆದರುವುದಿಲ್ಲ. ಎಲ್ಲಿ ಹೋರಾಟ ಆರಂಭವಾಯಿತೋ ಅಲ್ಲಿಂದ ಮತ್ತೆ ಹೋರಾಟ ಆರಂಭಿಸಲು ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ. ಕೋಲಾರದಿಂದಲೇ ಸತ್ಯಮೇವ ಜಯತೇ ಸಂದೇಶ ಹೋಗಲಿದೆ’ ಎಂದು ತಿಳಿಸಿದರು.

‘ಸಂಸತ್‌ನಲ್ಲಿ ಅದಾನಿ ವಿಚಾರ ಚರ್ಚಿಸಬಾರದೆಂದು ರಾಹುಲ್‌ ಅವರನ್ನು ಅನರ್ಹ ಮಾಡಲಾಗಿದೆ. ಭಾರತ್‌ ಜೋಡೋ ಯಾತ್ರೆಗೆ ಸಿಕ್ಕಿದ ಯಶಸ್ಸಿನಿಂದ ಬಿಜೆಪಿಗೆ ಭ್ರಮನಿರಸನವಾಗಿದೆ. ಹೇಗಾದರೂ ಮಾಡಿ ರಾಹುಲ್‌ ಹೋರಾಟಕ್ಕೆ ತಡೆಯೊಡ್ಡಲು ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ’ ಎಂದರು.

‘ಯಾವ ಘನ ಕಾರ್ಯ ಮಾಡಿದ್ದಾರೆ ಎಂದು ಎಂದು ಬಿಜೆಪಿಯವರು ರಾಜ್ಯದಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಸಿದರು? ಶೇ 40 ಕಮಿಷನ್‌ ಪಡೆದಿರುವುದಕ್ಕಾ? ಪೆಟ್ರೋಲ್‌, ಅಡುಗೆ ಅನಿಲ ಬೆಲೆ ಏರಿಸಿದ್ದಕ್ಕಾ? ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗದ್ದಕ್ಕಾ’ ಎಂದು ಪ್ರಶ್ನಿಸಿದರು.

‘ಬದ್ಧತೆ ಇಲ್ಲದ ಕೆಟ್ಟ, ಭ್ರಷ್ಟ ಸರ್ಕಾರ, ಶೇ 40 ಕಮಿಷನ್‌ ಸರ್ಕಾರ. ಈ ಬಗ್ಗೆ ರಾಜ್ಯದ ಜನರಿಗೆ ತಿಳಿಸುತ್ತೇವೆ’ ಎಂದರು.

‘ಪ್ರಧಾನಿ, ಗೃಹ ಸಚಿವರು ನೂರು ಬಾರಿ ಬಂದು ಹೋದರೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ. 150ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೋಲಾರ ಜಿಲ್ಲೆಯಲ್ಲಿ ಯಾವುದೇ ಬಣ, ತಂಡ ಇಲ್ಲ. ಇರುವುದು ಕಾಂಗ್ರೆಸ್‌ ತಂಡ ಮಾತ್ರ’ ಎಂದು ನುಡಿದರು.

ಅಭಿಷೇಕ್‌ ದತ್ತ ಭೇಟಿ: ಎಐಸಿಸಿ ಕಾರ್ಯದರ್ಶಿ ಅಭೀಷೇಕ್ ದತ್ತ ಕೂಡ ಬೆಳಿಗ್ಗೆ ಸಮಾವೇಶದ ಸ್ಥಳಕ್ಕೆ ಬಂದು ಸಿದ್ಧತೆ ವೀಕ್ಷಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಇದ್ದರು.

‘ಸತ್ಯಮೇವ ಜಯತೇ’ ಸಮಾವೇಶ: ‘ಸತ್ಯಮೇವ ಜಯತೇ’ ಸಮಾವೇಶ ನಡೆಯಲಿರುವ ಕೋಲಾರ ಹೊರವಲಯದ ಟಮಕದಲ್ಲಿನ ಮೈದಾನವನ್ನು ಸಲೀಂ ಪರಿಶೀಲಿಸಿದರು. ಸ್ಥಳೀಯ ಮುಖಂಡರೊಂದಿಗೆ ಅವರು ಸಭೆ ನಡೆಸಿದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಏ.9ರಂದು ಸಮಾವೇಶ ನಡೆಯಲಿದೆ. ಈ ಮೊದಲು ಏ.5ಕ್ಕೆ ನಿಗದಿಯಾಗಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ತಿಳಿಸಿದರು.

ಜಾಲಪ್ಪ ಆಸ್ಪತ್ರೆಯ ಮುಂಭಾಗದ 11 ಎಕರೆ ಜಮೀನಿನಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸಮಾವೇಶದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಎಲ್.ಎ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT