‘ಸತತ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯ’

7

‘ಸತತ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯ’

Published:
Updated:

ಕೋಲಾರ: ‘ಸತತ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು ಡಿವೈಎಸ್ಪಿ ಜಿ.ಅನುಷಾ ತಿಳಿಸಿದರು.

ನಗರದಲ್ಲಿ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ ಉದ್ಘಾಟಿಸಿ, ‘ಸ್ಪರ್ಧಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ ಮುಂದೆಯಿದ್ದು ಅದಕ್ಕಾಗಿ ಸತತ ಪ್ರಯತ್ನ ಮಾಡಿದ್ದೇ ಆದರೆ ಸಾಧನೆ ಮಾಡುವುದು ಕಷ್ಟವೇನು ಅಲ್ಲ’ ಎಂದರು.

‘ಕೆಲ ಸ್ಪರ್ಧಾಕಾಂಕ್ಷಿಗಳು ಪರೀಕ್ಷೆಗಳನ್ನು ಎದುರಿಸುವುದು ಕಷ್ಟ ಎಂಬ ಮನೋಭಾವನೆ ಹೊಂದಿರುತ್ತಾರೆ. ಮೊದಲು ಇಂತಹ ನಕಾರಾತ್ಮಕ ಭಾವನೆಗಳನ್ನು ಬಿಡಬೇಕು. ಮನಸ್ಸಿದ್ದರೆ ಯಾವುದೂ ಸಹ ಕಬ್ಬಿಣದ ಕಡಲೆ ಅಲ್ಲ ಎಂಬುವುದನ್ನು ಮನಗಾಣಬೇಕು’ ಎಂದು ಸಲಹೆ ನೀಡಿದರು.

‘ಪರೀಕ್ಷೆಗಳನ್ನು ಎದುರಿಸಬೇಕಾದರೆ ಕನಿಷ್ಟ 3 ತಿಂಗಳು ಶ್ರದ್ಧೆಯಿಂದ ಓದಿದ್ದೇ ಆದರೆ ಯಶಸ್ಸನ್ನು ಕಾಣಬಹುದು. ಅಲ್ಲದೆ ಮುಂದಿನ ಜೀವನವನ್ನೂ ಸಹ ಉತ್ತಮವಾಗಿ ರೂಪಿಸಿಕೊಳ್ಳಬಹುದು. ಅನವಶ್ಯಕವಾಗಿ ಯಾರೂ ಕಾಲಹರಣ ಮಾಡಬೇಡಿ’ ಎಂದು ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಯಾವುದನ್ನು ಓದಬೇಕು ? ಯಾವುದನ್ನು ಓದಬಾರದು ? ಎಂಬ ಬಗ್ಗೆ ಪಟ್ಟಿ ಮಾಡಿಕೊಳ್ಳಬೇಕು. ಯಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮಗೆ ತಿಳಿಯದೇ ಇದ್ದಲ್ಲಿ ಸಂಪನ್ಮೂಲ ವ್ಯಕ್ತಿಗಳ ಬಳಿ ಮಾಹಿತಿ ಪಡೆದುಕೊಂಡು ಅದರಂತೆ ನೀವು ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೆಲ ಇಲಾಖೆಗಳ ಆಯ್ಕೆ ಪ್ರಕ್ರಿಯೆಲ್ಲಿ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಪರೀಕ್ಷಾ ಸಿದ್ದತೆಯಲ್ಲಿ ನಮ್ಮ ಆಹಾರ ಪದ್ದತಿಯೂ ಸಹ ಪರಿಣಾಮ ಬೀರುತ್ತದೆ. ಹಾಗಾಗಿ ಮನೆ ಆಹಾರಕ್ಕೆ ಹೆಚ್ಚು ಪ್ರಾಶಸ್ಯ ನೀಡಿ’ ಎಂದು ಹೇಳಿದರು.

‘ಸರ್ಕಾರ ಸಾಕಷ್ಟು ಉದ್ಯೋಗಗಳಿಗೆ ಪರೀಕ್ಷೆಗಳನ್ನು ಕೈಗೊಳ್ಳುತ್ತಿವೆ. ಇವುಗಳನ್ನು ಸೂಕ್ತವಾಗಿ ಎದುರಿಸುವ ಕುರಿತು ಸ್ಪರ್ಧಾರ್ಥಿಗಳಿಗೆ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ ಕುಮಾರ್ ತಿಳಿಸಿದರು.

‘ಸಂಸ್ಥೆಯಲ್ಲಿ ಸ್ಪರ್ಧಾರ್ಥಿಗಳಿಗೆ ಪರಿಣಾಮಕಾರಿಯಾಗಿ ಭೋದನೆ ಮಾಡಲು ಸ್ಮಾರ್ಟ್‌ ಕ್ಲಾಸ್‌ ಹಾಗೂ ಮಾದರಿ ಪರೀಕ್ಷೆ ಕೈಗೊಳ್ಳಲು ತಯಾರಿ ನಡೆಸಲಾಗಿದೆ. ಜತೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿನ ಗೊಂದಲ ನಿವಾರಿಸಲು ಆನ್‌ಲೈನ್ ಪರೀಕ್ಷೆಗಳನ್ನು ಸಂಸ್ಥೆಯಲ್ಲಿ ಮಾಡಲು ಸಿದ್ಧತೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಡಿವೈಸ್ಪಿ ಜಿ.ಅನುಷಾ ತಂದೆ ಗಣೇಶ್, ತಾಯಿ ಕುಸುಮಾ, ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಎನ್.ಯು.ಸುಜಯ್, ಎಸ್.ಆರ್.ರಾಖೇಶ್, ಎಸ್.ಕಿರಣ್‌ಕುಮಾರ್, ಕೆ.ಎಸ್.ಭಾನುಪ್ರಕಾಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !