ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಿಂದ ಜಿಲ್ಲೆಯಲ್ಲಿ ಸಹಕಾರಿ ಸಪ್ತಾಹ

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಮಾಹಿತಿ
Last Updated 12 ನವೆಂಬರ್ 2020, 13:01 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದ ರೀತಿಯಲ್ಲಿ ಸಹಕಾರಿಗಳ ಮನಸ್ಥಿತಿ ಬದಲಾದರೆ ಮಾತ್ರ ಸಹಕಾರ ರಂಗ ಸದೃಢಗೊಳ್ಳಲು ಸಾಧ್ಯ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಒಕ್ಕೂಟದಿಂದ ನ.14ರಿಂದ 20ರವರೆಗೆ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಕೊರೊನಾ ಸೋಂಕು- ಆತ್ಮನಿರ್ಭರ ಭಾರತ ಮತ್ತು ಸಹಕಾರ ಎಂಬ ಧ್ಯೇಯದೊಂದಿಗೆ ಸಪ್ತಾಹ ಆಚರಿಸಲಾಗುವುದು’ ಎಂದು ಹೇಳಿದರು.

‘ಸಹಕಾರಿ ರಂಗ ರಾಜಕೀಯ ರಹಿತವಾಗಿ ಮುನ್ನಡೆಯಬೇಕು. ಸಹಕಾರಿ ಕ್ಷೇತ್ರದಲ್ಲಿರುವವರ ಮನಸ್ಸು ಬದಲಾಗಬೇಕು. ಕೇರಳ ಸಹಕಾರಿ ಬ್ಯಾಂಕ್ ಇಡೀ ದೇಶಕ್ಕೆ ಮಾದರಿಯಾಗಿದೆ. ಅದೇ ರೀತಿ ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸಬೇಕು. ಸಹಕಾರಿಗಳು ಒಗ್ಗೂಡಿ ಸಹಕಾರಿ ರಂಗವನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌–19 ಎಲ್ಲಾ ರಂಗಗಳಿಗೂ ಸಾಕಷ್ಟು ಹಾನಿ ಉಂಟು ಮಾಡಿದೆ. ಸಹಕಾರಿ ರಂಗಕ್ಕೂ ದೊಡ್ಡ ಪೆಟ್ಟು ಕೊಟ್ಟಿದೆ. ಈ ಸಂಕಷ್ಟದಿಂದ ಹೊರಬಂದು ಸಂಸ್ಥೆಗಳನ್ನು ಬಲಪಡಿಸುವ ಅನಿವಾರ್ಯತೆ ಎದುರಾಗಿದೆ’ ಎಂದರು.

ಕಾರ್ಯಕ್ರಮ ವಿವರ: ‘ಜಿಲ್ಲಾ ಸಹಕಾರ ಒಕ್ಕೂಟದಲ್ಲಿ ನ.14ರಂದು ಕೊರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ಧ್ಯೇಯದಡಿ ಕಾರ್ಯಕ್ರಮ ನಡೆಯಲಿದೆ. ನ.15ರಂದು ಮುಳಬಾಗಿಲು ಎಪಿಎಂಸಿಯಲ್ಲಿ ಸಹಕಾರಿ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ ಕುರಿತು, ನ.16ರಂದು ಕಾಡುದೇವಂಡಹಳ್ಳಿ ಡೇರಿಯಲ್ಲಿ ಅಂತರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣ ತರಬೇತಿಯ ಪುನರ್ಮನನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ನ.17ರಂದು ಬಂಗಾರಪೇಟೆ ಎಪಿಎಂಸಿ ಸಭಾಂಗಣದಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಬಲಪಡಿಸುವುದು, ಕೆಜಿಎಫ್‌ನ ಕಿಂಗ್ ಜಾರ್ಜ್ ಹಾಲ್‌ನಲ್ಲಿ ನ.18ರಂದು ವ್ಯವಹಾರ ಉದ್ಯೋಗ ಕಲೆದುಕೊಂಡವರು, ಬಾಧಿತರು, ಉದ್ಯೋಗಸ್ಥರಾಗಲು ಕೌಶಲಾಭಿವೃದ್ಧಿ, ಕೋಲಾರದ ಪತ್ರಕರ್ತರ ಭವನದಲ್ಲಿ ನ.19ರಂದು ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ವಿಷಯ ಕುರಿತು ಕಾರ್ಯಕ್ರಮ ನಡೆಯಲಿವೆ’ ಎಂದು ಮಾಹಿತಿ ನೀಡಿದರು.

‘ಮಾಲೂರಿನ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ನ.20ರಂದು ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ ಡಿಜಿಟಲೈಜೇಷನ್ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ಕೆ.ವಿ.ದಯಾನಂದ್, ಜಿಲ್ಲಾ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಎಸ್.ವಿ.ಗೋವರ್ದನರೆಡ್ಡಿ, ನಿರ್ದೇಶಕರಾದ ಎಸ್.ಆರ್.ರುದ್ರಸ್ವಾಮಿ, ಇ.ಗೋಪಾಲಪ್ಪ, ಆರ್.ಅರುಣಾ, ಡಿ.ಆರ್.ರಾಮಚಂದ್ರೇಗೌಡ, ಶಂಕರನಾರಾಯಣಗೌಡ, ಎನ್.ನಾಗರಾಜ್, ಸುರೇಶ್, ರಮೇಶ್, ಪಿಎಂ.ವೆಂಕಟೇಶ್, ಒಕ್ಕೂಟದ ಸಿಇಒ ಕೆ.ಎಂ.ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT