ಸೋಮವಾರ, ಜುಲೈ 26, 2021
23 °C
ಕೇಂದ್ರದ ವಿರುದ್ಧ ಸಿಪಿಎಂ ಕಾರ್ಯಕರ್ತರ ಆರೋಪ: ಪ್ರತಿಭಟನೆ

ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌–19 ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲೆಯಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರದಲ್ಲಿ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡಿದ ಕಾರ್ಯಕರ್ತರು, ‘ದೇಶವು ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿತ್ತು. ಕೊರೊನಾ ಸೋಂಕಿನ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಕೃಷಿಕರು, ಕಾರ್ಮಿಕರು, ಬಡವರು, ದಲಿತರ ಬದುಕು ಬರ್ಬರವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಬಡ ಜನರ ಬದುಕು ಸುಧಾರಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳಿಗೆ ಆರ್ಥಿಕ ಸಂಪನ್ಮೂಲಗಳ ನೆರವು ನೀಡುತ್ತಿದೆ. ಕೋವಿಡ್‌–19 ಸಂದರ್ಭ ಬಳಸಿಕೊಂಡು ತೆರೆಮರೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾನೂನು ಜಾರಿಗೊಳಿಸುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ವಿ.ಗೀತಾ ಕಿಡಿಕಾರಿದರು.

‘ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಸುಮಾರು 8 ಸಾವಿರ ಮಂದಿ ಸೋಂಕಿತರು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಹಸಿವಿನಿಂದ ಸಾಕಷ್ಟು ಮಂದಿ ಅಸುನೀಗಿದ್ದಾರೆ. ವಲಸೆ ಕಾರ್ಮಿಕರು ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದೇ ಪ್ರಧಾನಿ ಮೋದಿ ಸರ್ಕಾರದ ಸಾಧನೆ’ ಎಂದು ವ್ಯಂಗ್ಯವಾಡಿದರು.

ಲೂಟಿಗೆ ಅವಕಾಶ: ‘ರಾಜ್ಯ ಸರ್ಕಾರ ಎಪಿಎಂಸಿಗಳನ್ನು ನಿಯಂತ್ರಣದಿಂದ ಮುಕ್ತಗೊಳಿಸಿ ಕಾರ್ಪೊರೇಟ್‌ ಕಂಪನಿಗಳ ಲೂಟಿಗೆ ಅವಕಾಶ ನೀಡಿದೆ. ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಜನರ ತಲಾ ಆದಾಯ ಹೆಚ್ಚಿಸುವ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರು ಮಾಡುವ ನೀತಿ ಜಾರಿಗೆ ತಂದಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ₹ 7,500 ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿಯಂತೆ 6 ತಿಂಗಳು ಪಡಿತರ ವಿತರಿಸಬೇಕು. ನರೇಗಾ ಕೂಲಿ ಮೊತ್ತವನ್ನು ₹ 600ಕ್ಕೆ ಹೆಚ್ಚಿಸಬೇಕು. ವರ್ಷದಲ್ಲಿ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ನಗರ ಪ್ರದೇಶದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿಜಿಕೃಷ್ಣ, ವಿ.ಅಂಬರೀಶ್, ಎನ್.ಎನ್.ಶ್ರೀರಾಮ್, ವಿ.ನಾರಾಯಣರೆಡ್ಡಿ, ಎ.ವಿ.ರಮೇಶ್, ಆಶಾ, ಯಲ್ಲಪ್ಪ, ಭೀಮರಾಜ್, ಸುನಂದಮ್ಮ, ಮಂಜುನಾಥ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.