ಗುರುವಾರ , ಜೂಲೈ 9, 2020
29 °C
ಜಿಲ್ಲೆಯಲ್ಲಿ 19ಕ್ಕೆ ಏರಿದ ಸೋಂಕಿತರ ಸಂಖ್ಯೆ: ಹೆಚ್ಚಿದ ಆತಂಕ

ಕೋಲಾರದಲ್ಲಿ ಟೆಕ್ಕಿ, ವ್ಯಾಪಾರಿಗೆ ಕೋವಿಡ್‌ ದೃಢ: ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿನ 2 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.

ಜಿಲ್ಲಾ ಕೇಂದ್ರದ ಹೃದಯ ಭಾಗ ಗೌರಿಪೇಟೆಯಲ್ಲಿನ 45 ವರ್ಷದ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದ್ದು, ನಗರವಾಸಿಗಳಲ್ಲಿ ಆತಂಕ ಹೆಚ್ಚಿದೆ. ತರಕಾರಿ ಹಾಗೂ ಕೋಳಿ ವ್ಯಾಪಾರ ಮಾಡುವ ಸೋಂಕಿತ ವ್ಯಕ್ತಿಯು ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇವರು ಆರೋಗ್ಯ ತಪಾಸಣೆಗಾಗಿ ಮೇ 25ರಂದು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲದೇ, ವಿವಿಧ ವೈದ್ಯಕೀಯ ಪರೀಕ್ಷೆಗಳಿಗಾಗಿ ಬೆಂಗಳೂರಿನ ಹಲವು ಪ್ರಯೋಗಾಲಯಗಳಿಗೆ ಹೋಗಿ ಬಂದಿದ್ದರು. ಎಚ್‌ಸಿಜಿ ಆಸ್ಪತ್ರೆಯಲ್ಲಿ ತಪಾಸಣೆಗೂ ಮುನ್ನ ಇವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನಂತರ ಇವರು ಕೋಲಾರಕ್ಕೆ ಮರಳಿದ್ದರು.

ಶನಿವಾರ ರಾತ್ರಿ ಪ್ರಯೋಗಾಲಯದ ವರದಿ ಬಂದಿದ್ದು, ಇವರು ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಸ್ನೇಹಿತರೊಬ್ಬರಿಗೆ ಕೊರೊನಾ ಸೋಂಕು ಇರುವುದು ಪ್ರಾಥಮಿಕ ಪರೀಕ್ಷೆಯಿಂದ ಗೊತ್ತಾಗಿದೆ. ಅವರಿಂದ ಅಥವಾ ಬೆಂಗಳೂರಿನ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಲ್ಲಿ ಗೌರಿಪೇಟೆಯ ವ್ಯಕ್ತಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೋಂಕಿತ ವ್ಯಕ್ತಿಯ ಜತೆ ಪತ್ನಿ, 3 ಮಕ್ಕಳು, ಇಬ್ಬರು ಸ್ನೇಹಿತರು ಹಾಗೂ ಕಾರು ಚಾಲಕರೊಬ್ಬರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದು, ಇವರೆಲ್ಲರ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಪತ್ನಿ, ಒಬ್ಬರು ಸ್ನೇಹಿತರು ಹಾಗೂ ಕಾರು ಚಾಲಕರಿಗೆ ಸೋಂಕು ತಗುಲಿರುವುದಾಗಿ ಸ್ಕ್ರೀನಿಂಗ್‌ ಟೆಸ್ಟ್‌ನಲ್ಲಿ ವರದಿ ಬಂದಿದ್ದು, ಖಾತ್ರಿಗಾಗಿ ಕಫಾ ಮತ್ತು ರಕ್ತ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈ ಮೂವರನ್ನೂ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಸೋಮವಾರ ವರದಿ ಬರುವ ನಿರೀಕ್ಷೆಯಿದೆ.

ಟೆಕ್ಕಿಗೆ ಸೋಂಕು: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರದಲ್ಲಿ ವಾಸವಿರುವ 35 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಸೋಂಕು ತಗುಲಿದೆ. ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ಇವರು ಮೇ 22ರಂದು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು. ನಂತರ ಇವರನ್ನು ಬೆಂಗಳೂರಿನ ಹೆಬ್ಬಾಳದ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಿ, ಅಲ್ಲಿಯೇ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಬಳಿಕ ಇವರು ಮೇ 27ರಂದು ಬಂಗಾರಪೇಟೆಗೆ ಬಂದಿದ್ದರು. ಇದೀಗ ಭಾನುವಾರ ಇವರ ವೈದ್ಯಕೀಯ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಇವರ ಜತೆ ತಂದೆ, ತಾಯಿ ಮತ್ತು ಅಕ್ಕನ ಮಗಳು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದು, ಆ ಮೂರೂ ಮಂದಿಯನ್ನು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಕಂಟೈನ್‌ಮೆಂಟ್‌: ಕೋಲಾರದ ಗೌರಿಪೇಟೆ ಮತ್ತು ಬಂಗಾರಪೇಟೆಯ ವಿವೇಕಾನಂದ ನಗರದಲ್ಲಿನ ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ಸೀಲ್‌ಡೌನ್‌ ಮಾಡಲಾಗಿದೆ. ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಈ ಬಡಾವಣೆಗಳು ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಬಡಾವಣೆಯೊಳಗೆ ಬರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು