ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಕೊರೊನಾ | ಸಾವಿನ ಸಂಖ್ಯೆ ತಗ್ಗಿಸಿ: ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ

Last Updated 1 ಜುಲೈ 2020, 15:20 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಿ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೊರೊನಾ ಸೋಂಕಿನ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಇದರಿಂದ ಸೋಂಕಿತರು ಕಡಿಮೆ ಅವಧಿಯಲ್ಲಿ ಗುಣಮುಖರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಸೋಂಕಿತರಿಗೆ ಸದ್ಯ ದ್ವಿದಳ ಧಾನ್ಯಗಳು, ಮೊಳಕೆ ಕಾಳು, ಮೊಟ್ಟೆ, ಬಾಳೆ ಹಣ್ಣು, ಚಪಾತಿ ನೀಡಲಾಗುತ್ತಿದೆ.ಇನ್ನೂ ಹೆಚ್ಚಿನ ಪೌಷ್ಟಿಕ ಅಂಶವಿರುವ ಆಹಾರ ನೀಡಲು ಕ್ರಮ ವಹಿಸಿ. ವಾರದಲ್ಲಿ ಒಂದು ಬಾರಿ ಮಾಂಸಾಹಾರದ ಊಟ ಕೊಡಿ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರಸ್ತುತ 63 ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಈ ಪೈಕಿ 27 ಮಂದಿ ಸೋಂಕಿತರು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಾಗೂ 36 ಸೋಂಕಿತರು ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 57 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ’ ಎಂದು ವಿವರಿಸಿದರು.

‘ಜೂನ್ 10ರಿಂದ ಜೂನ್ ಅಂತ್ಯದವರೆಗೆ 4,333 ಮಂದಿಯ ಕಫಾ ಮಾದರಿ ಪರೀಕ್ಷಿಸಲಾಗಿದೆ. ಪ್ರತಿನಿತ್ಯ ಸರಾಸರಿ 206 ಮಂದಿಯ ಕಫಾ ಮಾದರಿ ಪರೀಕ್ಷಿಸಲಾಗುತ್ತಿದ್ದು, ಇದನ್ನು 320ಕ್ಕೆ ಹೆಚ್ಚಿಸಲಾಗುವುದು’ ಎಂದು ಮಾಹಿತಿ ನೀಡಿದರು.

200 ಹಾಸಿಗೆ: ‘ಎಸ್ಎನ್ಆರ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸದ್ಯ 200 ಹಾಸಿಗೆ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 100 ಬೆಡ್‌ ವ್ಯವಸ್ಥೆ ಮಾಡಲಾಗುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಿದರೆ ಕೆಜಿಎಫ್‌ನ ಸಂಭ್ರಮ್ ಆಸ್ಪತ್ರೆಯಲ್ಲಿ 200 ಬೆಡ್, ಶ್ಯಾಮ್ ಆಸ್ಪತ್ರೆಯಲ್ಲಿ 150 ಬೆಡ್‌ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಸೋಂಕಿತರಿಗೆ ಚಿಕಿತ್ಸೆ ನೀಡಲು ಸದ್ಯ 5 ಮಂದಿ ತಜ್ಞ ವೈದ್ಯರಿದ್ದಾರೆ. ಸೋಂಕಿನ ಪ್ರಕರಣ ಹೆಚ್ಚಾದರೆ ಖಾಸಗಿ ಆಸ್ಪತ್ರೆ ವೈದ್ಯರ ಸೇವೆ ಬಳಸಿಕೊಳ್ಳಲಾಗುವುದು. ಸೋಂಕಿತರ ಚಿಕಿತ್ಸೆಗಾಗಿ ವೈದ್ಯರ 10 ವಿಶೇಷ ತಂಡ ರಚಿಸಲಾಗುವುದು. ಜಿಲ್ಲೆಯಲ್ಲಿ 41 ಸಾವಿರ ಪಿಪಿಇ ಕಿಟ್‌, 14,400 ಎನ್–95 ಮಾದರಿ ಮಾಸ್ಕ್‌ ಮತ್ತು ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್‌ಗಳ ಸೌಲಭ್ಯವಿದೆ’ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ ವಾರ್ಡ್‌: ‘ಎಸ್ಎನ್ಆರ್ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್‌ ವಾರ್ಡ್‌ ಇದೆ. ಈ ಪೈಕಿ 90 ಹಾಸಿಗೆಗಳನ್ನು ಶಂಕಿತ ಸೋಂಕಿತರಿಗೆ ಹಾಗೂ 70 ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ಉಳಿದ 40 ಹಾಸಿಗೆಗಳನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಮೀಸಲಿಡಲಾಗಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಚಾರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT