ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ| ಬಿಜೆಪಿ ಗೆಲುವು ನಿಶ್ಚಿತ:ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿಶ್ವಾಸ
Last Updated 28 ಅಕ್ಟೋಬರ್ 2020, 13:13 IST
ಅಕ್ಷರ ಗಾತ್ರ

ಕೋಲಾರ: ‘ವಿಧಾನ ಪರಿಷತ್ತಿನ ಎಲ್ಲಾ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. 2 ಮತ್ತು 3ನೇ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಜೂನಿಯರ್ ಕಾಲೇಜು ಮತಗಟ್ಟೆಗೆ ಬುಧವಾರ ಭೇಟಿ ನೀಡಿ ಮಾತನಾಡಿ, ‘ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳಿಂದ ಯಾವುದೇ ತೊಂದರೆಯಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯ 9 ತಾಲ್ಲೂಕುಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತ ಗಳಿಸುತ್ತಾರೆ. ಅದೇ ರೀತಿ ದಾವಣಗೆರೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲೂ ಬಿಜೆಪಿ ಅಭ್ಯರ್ಥಿ ಹೆಚ್ಚು ಮತ ಗಳಿಸಲಿದ್ದು, ಯಾರಿಂದಲೂ ಗೆಲುವು ತಪ್ಪಿಸಲು ಸಾಧ್ಯವಿಲ್ಲ’ ಎಂದರು.

‘ವಿಧಾನ ಪರಿಷತ್ತಿನ 4 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜಯ ಕಟ್ಟಿಟ್ಟ ಬುತ್ತಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಬಿಜೆಪಿ ಚುನಾವಣೆಯಾಗಿದೆ. ಯುವಕರು ಹಾಗೂ ವಿದ್ಯಾವಂತ ಪದವೀಧರರು ಪ್ರಧಾನಿ ಮೋದಿ ಪರ ನಿಂತಿದ್ದಾರೆ, ಸರ್ಕಾರಿ ನೌಕರರು, ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ತೋರಿದಷ್ಟು ಕಾಳಜಿ ಬೇರಾವುದೇ ಸರ್ಕಾರ ತೋರಿಲ್ಲ. ಈ ಸತ್ಯ ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.

ಉಚ್ಛಾಟನೆ: ‘ಜಿ.ಟಿ.ಶ್ರೀನಿವಾಸ್ ಮತ್ತು ಲೇಪಾಕ್ಷರನ್ನು ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಈಗ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ. ಹಿಂದಿನ ಎಲ್ಲಾ ಪರಿಷತ್ ಚುನಾವಣೆಗಳಲ್ಲೂ ಬಂಡಾಯವಾಗಿ ನಿಂತವರು ಎಷ್ಟು ಮತ ಪಡೆದರೆಂಬ ಇತಿಹಾಸದ ಅರಿವಿದೆ. ಬಂಡಾಯ ಅಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮತಗಟ್ಟೆ ಮುಂಭಾಗದ ಪೆಂಡಾಲ್‌ನಲ್ಲಿ ಕುಳಿತ ನಾರಾಯಣಸ್ವಾಮಿ ಅವರು ಸ್ವತಃ ಮತದಾರರಿಗೆ ಕ್ರಮ ಸಂಖ್ಯೆ ಬರೆದು ಕೊಟ್ಟು, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು. ಮತಗಟ್ಟೆ ಮುಂಭಾಗ ಹಾಕಲಾಗಿದ್ದ ಜೆಡಿಎಸ್, ಕಾಂಗ್ರೆಸ್ ಮತ್ತು ಪಕ್ಷೇತರರ ಪೆಂಡಾಲ್‌ಗಳಿಗೂ ಭೇಟಿ ನೀಡಿ ಬಿಜೆಪಿಗೆ ಮತ ನೀಡಿ ಎಂದು ಕೋರುವ ಮೂಲಕ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT