ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ: ಸಿದ್ಧತೆಗೆ ಮನವಿ

ಮಕ್ಕಳ ಸುರಕ್ಷತೆಗೆ ಕಾಳಜಿ ವಹಿಸಲು ರೈತ ಸಂಘ ಸದಸ್ಯರ ಒತ್ತಾಯ
Last Updated 28 ಜೂನ್ 2021, 14:52 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ 3ನೇ ಅಲೆ ಹಾಗೂ ಡೆಲ್ಟಾ ಪ್ಲಸ್ ವೈರಸ್‌ ಹಾವಳಿಯಿಂದ ಮಕ್ಕಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯಿತಿಗೊಂದು ಕೋವಿಡ್‌ ಆರೈಕೆ ಕೇಂದ್ರ ತೆರೆಯಬೇಕೆಂದುರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಕೋವಿಡ್‌ 2ನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾದವು. 2ನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದವು. ಸೋಂಕಿತರಿಗೆ ಸಕಾಲಕ್ಕೆ ಬೆಡ್‌, ವೈದ್ಯಕೀಯ ಆಮ್ಲಜನಕ ಸಿಗದೆ ತೀವ್ರ ತೊಂದರೆ ಅನುಭವಿಸಿದರು ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌ 2ನೇ ಅಲೆಯ ತೀವ್ರತೆಗೆ ಜನ ಭಯಭೀತರಾಗಿದ್ದಾರೆ. ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಲೂ ಮೂಲಸೌಕರ್ಯಗಳಿಲ್ಲ. ವೈದ್ಯಕೀಯ ಸಲಕರಣೆ, ಸಿಬ್ಬಂದಿ, ವೆಂಟೆಲೇಟರ್‌, ವೈದ್ಯಕೀಯ ಆಮ್ಲಜನಕದ ಕೊರತೆಯಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಕೋವಿಡ್‌ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ತಜ್ಞರ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆ. ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ದೇಶದ 11ಕ್ಕೂ ಹೆಚ್ಚು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಒತ್ತಾಯಿಸಿದರು.

ಸುಲಿಗೆ ಮಾಡುತ್ತಿವೆ: ‘ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರ ಸೇವೆಗಿಂತ ಹಣ ಸಂಪಾದನೆಯೇ ಮುಖ್ಯವಾಗಿದೆ. ಸೋಂಕಿತರು ಲಕ್ಷಗಟ್ಟಲೇ ಹಣ ಕೊಟ್ಟರೂ ಉತ್ತಮ ವೈದ್ಯಕೀಯ ಸೇವೆ ಸಿಗುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಅಗತ್ಯತೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಡ್, ತೀವ್ರ ನಿಗಾ ಘಟಕ, ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಿಕೊಳ್ಳಬೇಕು. ಖಾಲಿಯಿರುವ ವೈದ್ಯಕೀಯ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಕೋವಿಡ್‌ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಕಾಳಸಂತೆಯಲ್ಲಿ ಔಷಧ ಮಾತ್ರೆ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಕೋರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ನಾಗೇಶ್, ಅಶ್ವತ್ಥಪ್ಪ, ಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT