ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ: ಜಾಗೃತಿ ಕಾರ್ಯಕ್ರಮ

Last Updated 19 ಆಗಸ್ಟ್ 2021, 15:28 IST
ಅಕ್ಷರ ಗಾತ್ರ

ಕೋಲಾರ: ಬಿಜೆಪಿ ನಗರ ಅಲ್ಪಸಂಖ್ಯಾತ ಘಟಕದ ವತಿಯಿಂದ ನಗರದ ಕಠಾರಿಪಾಳ್ಯದಲ್ಲಿ ಗುರುವಾರ ಕೋವಿಡ್‌ 3ನೇ ಅಲೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದತ್ ನವೀದ್, ‘ನಗರದಲ್ಲಿ ಸಾಕಷ್ಟು ಅಂಗವಿಕಲರಿದ್ದು, ಇವರಲ್ಲಿ ಬಹುಪಾಲು ಮಂದಿ ಕಡು ಬಡವರಾಗಿದ್ದಾರೆ. ಇವರಿಗೆ ಸಕಾಲಕ್ಕೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು’ ಎಂದು ತಿಳಿಸಿದರು.

‘ಪಿಂಚಣಿ, ವಾಹನಗಳು ಹಾಗೂ ವಸತಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಂಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೋವಿಡ್‌ 2ನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದವು. ಜನರು ಕೋವಿಡ್‌ 3ನೇ ಅಲೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಕೆಂಬೋಡಿ ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

‘ಕೋವಿಡ್‌ 3ನೇ ಅಲೆ ತಡೆಗೆ ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು. ಕೋವಿಡ್‌ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾರುಕಟ್ಟೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಆಗಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ವೈದ್ಯರನ್ನು ಸಂಪರ್ಕಿಸಿ: ‘ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಮಕ್ಕಳಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ತಡ ಮಾಡದೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಕನ್ನಡ ಸೇನೆ ಮುಖಂಡ ಶ್ರೀಧರ್ ಹೇಳಿದರು.

ಅಂಗವಿಕಲರು ಹಾಗೂ ಮಕ್ಕಳಿಗೆ ಸ್ಯಾನಿಟೈಸರ್‌, ಮಾಸ್ಕ್ ಹಾಗೂ ಸಿಹಿ ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ, ನಗರ ಮಹಿಳಾ ಮಂಡಳ ಪ್ರಧಾನ ಕಾರ್ಯದರ್ಶಿ ಹೇಮಾ, ಸಮಾಜ ಸೇವಕರಾದ ಲೋಕೇಶ್, ಎಸ್.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT