ಬುಧವಾರ, ಸೆಪ್ಟೆಂಬರ್ 22, 2021
28 °C
ಕಾನೂನಿನ ಕಣ್ತಪ್ಪಿಸುವ ಪೋಷಕರಿಗೆ ಮಕ್ಕಳ ರಕ್ಷಣಾ ಘಟಕದ ಅಂಕುಶ

ಕೋವಿಡ್‌ ಕಾಲಘಟ್ಟದಲ್ಲಿ ಬಾಲ್ಯವಿವಾಹಕ್ಕೆ ತೆರೆಮರೆ ಪ್ರಯತ್ನ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌–19 ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಪ್ರಯತ್ನ ಹೆಚ್ಚಿನ ಪ್ರಮಾಣದಲ್ಲಿ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಯೋಚಿತ ಕಾರ್ಯತತ್ಪರತೆಯಿಂದ ಮದುವೆಗಳಿಗೆ ಕಡಿವಾಣ ಬಿದ್ದಿದೆ.

ಲಾಕ್‌ಡೌನ್‌ ನಿರ್ಬಂಧ ಹಾಗೂ ಕೋವಿಡ್‌ ಸಂಕಷ್ಟದಿಂದ ಉಂಟಾದ ಸ್ತಬ್ಧತೆಯ ಲಾಭ ಪಡೆದು ಸಾಕಷ್ಟು ಪೋಷಕರು ತೆರೆಮರೆಯಲ್ಲೇ ಮಕ್ಕಳಿಗೆ ಮದುವೆ ಮಾಡಲು ಯತ್ನಿಸಿದ್ದಾರೆ. ಬಾಲ್ಯವಿವಾಹ ತಡೆ ಕಾಯ್ದೆ ಜಾರಿಯಲ್ಲಿದ್ದರೂ ಪೋಷಕರು ಅಧಿಕಾರಿಗಳ ಹಾಗೂ ಕಾನೂನಿನ ಕಣ್ತಪ್ಪಿಸಿ ಗುಟ್ಟಾಗಿ ಮಕ್ಕಳ ಮದುವೆ ಮಾಡಲೆತ್ನಿಸಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಪೊಲೀಸ್‌ ಇಲಾಖೆ ಸೇರಿದಂತೆ ಇಡೀ ಜಿಲ್ಲಾಡಳಿತ ಸಂಪೂರ್ಣವಾಗಿ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ಪೋಷಕರು ಪರಿಸ್ಥಿತಿಯ ಲಾಭ ಪಡೆದು ಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಮದುವೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಏಪ್ರಿಲ್‌ ತಿಂಗಳ ಆರಂಭದಿಂದ ಜುಲೈ ಅಂತ್ಯದವರೆಗೆ ಬಾಲ್ಯವಿವಾಹಕ್ಕೆ ಹೆಚ್ಚು ಪ್ರಯತ್ನ ನಡೆದಿವೆ. ಮುಖ್ಯವಾಗಿ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರ ದೂರು ಆಧರಿಸಿ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮದುವೆ ತಡೆದು ಬಾಲಕಿಯರನ್ನು ರಕ್ಷಿಸಿದ್ದಾರೆ.

49 ಪ್ರಕರಣಕ್ಕೆ ತಡೆ: ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ ಒಟ್ಟಾರೆ 39 ಬಾಲ್ಯವಿವಾಹ ಪ್ರಕರಣ ತಡೆಯಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ಕೇವಲ 4 ತಿಂಗಳಲ್ಲೇ 49 ಬಾಲ್ಯವಿವಾಹ ಪ್ರಕರಣ ತಡೆಯಲಾಗಿದೆ.

ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಬಂದ್‌ ಆಗಿರುವ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಶೀಘ್ರವೇ ಮದುವೆ ಮಾಡಿ ಕಳುಹಿಸಬೇಕೆಂಬ ಯೋಚನೆ ಪೋಷಕರ ಮನದಲ್ಲಿ ಸುಳಿದಾಡುತ್ತಿದೆ. ಮಕ್ಕಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕೆಂಬ ಭಾವನೆ ಪೋಷಕರಲ್ಲಿ ಬಲಗೊಂಡಿದೆ.

ಹೆಚ್ಚು ನಿಗಾ: ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲ್ಯವಿವಾಹದ ಮೇಲೆ ಹೆಚ್ಚು ನಿಗಾ ವಹಿಸಿದ್ದಾರೆ. ಬಾಲ್ಯವಿವಾಹದ ಸಂಬಂಧ ಸಾರ್ವಜನಿಕರಿಂದ ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ಮದುವೆಗಳನ್ನು ತಡೆಯುತ್ತಿದ್ದಾರೆ. ಅಲ್ಲದೇ, ಬಾಲಕಿಯರನ್ನು ರಕ್ಷಿಸಿ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲವೆಂದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದ್ದಾರೆ. ಮದುವೆ ಪ್ರಯತ್ನ ಮುಂದುವರಿಸಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ಸಹ ನೀಡುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಕಾರ್ಯಾಚರಣೆ, ಪೊಲೀಸರ ನಿಗಾ ನಡುವೆಯೂ ಹಲವೆಡೆ ಗುಟ್ಟಾಗಿ ಬಾಲ್ಯವಿವಾಹ ನಡೆಯುತ್ತಿದ್ದು, ಬಾಲಕಿಯರು ಗರ್ಭಿಣಿಯರಾಗಿ ಆಸ್ಪತ್ರೆಗೆ ಬಂದ ಬಳಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು