ಶುಕ್ರವಾರ, ಆಗಸ್ಟ್ 6, 2021
21 °C

ಬಂಗಾರಪೇಟೆ ತಹಶೀಲ್ದಾರ್ ಕೊಲೆ ಪ್ರಕರಣ: ಆರೋಪಿಗೆ ಕೋವಿಡ್‌ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣದ ಆರೋಪಿ ವೆಂಕಟಾಚಲಪತಿ ಅವರನ್ನು ಕಾಮಸಮುದ್ರ ಠಾಣೆ ಪೊಲೀಸರು ವಿಡಿಯೋ ಸಂವಾದದ ಮೂಲಕ ಶುಕ್ರವಾರ ಬಂಗಾರಪೇಟೆ ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

ಬಳಿಕ ನ್ಯಾಯಾಧೀಶರು ಆರೋಪಿಗೆ ಕೋವಿಡ್‌–19 ತಪಾಸಣೆ ಮಾಡಿಸುವಂತೆ ಆದೇಶಿಸಿದರು. ಈ ಆದೇಶದ ಅನ್ವಯ ಪೊಲೀಸರು ಬಂಗಾರಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗೆ ಕೋವಿಡ್‌ ತಪಾಸಣೆ ಮಾಡಿಸಿದ್ದು, ಶನಿವಾರ ವೈದ್ಯಕೀಯ ವರದಿ ಬರುವ ನಿರೀಕ್ಷೆಯಿದೆ.

ವೈದ್ಯಕೀಯ ವರದಿ ಬಂದ ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲು ನಿರ್ಧರಿಸಿರುವ ಪೊಲೀಸರು ವೆಂಕಟಾಚಲಪತಿಯನ್ನು ಕೆಜಿಎಫ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಹಾಗೂ ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಅವರು ಕಳವಂಚಿ ಗ್ರಾಮದಲ್ಲಿ ತಹಶೀಲ್ದಾರ್‌ರ ಕೊಲೆ ನಡೆದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಘಟನೆ ಸಂಬಂಧ ಕೆಜಿಎಫ್‌ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಮಹಮ್ಮದ್‌ ಸುಜಿತಾ ಹಾಗೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಆರೋಪಿಯ ಪಶ್ಚಾತ್ತಾಪ: ಘಟನೆ ನಂತರ ಆರೋಪಿ ವೆಂಕಟಾಚಲಪತಿ, ‘ತಹಶೀಲ್ದಾರ್‌ರನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆದರೆ, ಜಮೀನು ಕಳೆದುಕೊಳ್ಳುವ ಬೇಸರದಿಂದ ಈ ರೀತಿ ಮಾಡಿದೆ’ ಎಂದು ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ ಎಂದು ಪೊಲೀಸ್‌ ಇಲಾಖೆ ಉನ್ನತ ಮೂಲಗಳು ಹೇಳಿವೆ.

‘ಪ್ರಕರಣದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಪ್ರಕರಣದಲ್ಲಿ ಪೊಲೀಸರ ವೈಫಲ್ಯವಿದೆ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕೋಲಾರ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಮಾಡಿಸಲಾಗುತ್ತಿದೆ’ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು