ಮಂಗಳವಾರ, ಜನವರಿ 26, 2021
16 °C

ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಿಸಿದ ಕೂಡಲೇ ಥರ್ಮಲ್ ಸ್ಕ್ರೀನಿಂಗ್‌ನಿಂದ ಅವರ ದೇಹದ ಉಷ್ಣತೆ ಪರೀಕ್ಷಿಸಬೇಕು. ಸಾಬೂನು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಲು ಅವಕಾಶ ಕಲ್ಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ಕೆಂಪಯ್ಯ ಸೂಚಿಸಿದರು.

ವಿದ್ಯಾರ್ಥಿಗೆ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲೆ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಎಲ್ಲೆಡೆ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಬೇಕು. ತಪ್ಪದೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ.

ವಿದ್ಯಾಗಮ ಯೋಜನೆಯಡಿ ಎಲ್ಲಾ ಶಾಲೆಗಳು ಆರಂಭಿಸಬೇಕಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ಮೊಬೈಲ್, ಇಂಟರ್‌ನೆಟ್ ಸೌಲಭ್ಯ ಇಲ್ಲದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯ ನಿರಂತರತೆ ಕಾಪಾಡಲು ಈ ಯೋಜನೆಯಿಂದ ಸಾಧ್ಯವಾಗಲಿದೆ ಎಂದಿದ್ದಾರೆ.

ಬಾಲಕಾರ್ಮಿಕ, ಬಾಲ್ಯವಿವಾಹ ತಡೆ ಹಾಗೂ ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ಖಚಿತಪಡಿಸಿಕೊಳ್ಳಲು ಸುಲಭ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಹಾಗೂ ಪೋಷಕರಿಗೆ ಯೋಜನೆ ವರದಾನವಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಶಿಕ್ಷಕರು, ಶಿಕ್ಷಕರು ಕೋವಿಡ್ ಲಕ್ಷಣ ಕಂಡುಬಂದಲ್ಲಿ ಶಾಲೆಗೆ ಹಾಜರಾಗಬಾರದು. ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ರಜೆ ಪಡೆಯಬೇಕು. ಸುರಕ್ಷತೆ ವಹಿಸಿ ಶಾಲಾ ಕಾರ್ಯ ನಿರ್ವಹಿಸುವ ಬಗ್ಗೆ ತಪಾಸಣಾ ಪಟ್ಟಿ ಒದಗಿಸಿದ್ದು, ಅದರಂತೆ ನಿತ್ಯ ಪರಿಶೀಲಿಸಿ ಮುಖ್ಯ ಶಿಕ್ಷಕರು ದೃಢೀಕರಿಸಬೇಕು ಎಂದು ಸೂಚಿಸಿದ್ದಾರೆ.

‘ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಿ ಶಾಲೆಗೆ ಹಾಜರಾಗಬೇಕು. ಪುಸ್ತಕಗಳ ಜತೆ ಮತ್ತೊಂದು ಬ್ಯಾಗ್‌‌ನಲ್ಲಿ ಟವೆಲ್, ಕಾಯಿಸಿ ಆರಿಸಿದ ನೀರು, ಸ್ಯಾನಿಟೈಸರ್ ಕಳುಹಿಸಬೇಕು. ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಮಕ್ಕಳು ಶಾಲೆಗೆ ಹಾಜರಾಗುವಂತಿಲ್ಲ’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ರಾಧಮ್ಮ ಹೇಳಿದ್ದಾರೆ.

ಮಕ್ಕಳು ಶಾಲೆಯಲ್ಲಿ ಅನಗತ್ಯವಾಗಿ ಯಾವುದೇ ವಸ್ತುಗಳನ್ನು ಅಥವಾ ಸ್ನೇಹಿತರನ್ನು ಮುಟ್ಟದಂತೆ ಶಿಕ್ಷಕರು ನಿಗಾವಹಿಸಬೇಕು. ಶೌಚಾಲಯ, ಶಾಲಾ ಆವರಣವನ್ನು ಸ್ವಚ್ಛವಾಗಿ ಇಡಬೇಕು. ವಿದ್ಯಾಗಮ ಯೋಜನೆ ಮಾರ್ಗಸೂಚಿ ಹಾಗೂ ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶ ಪಾಲಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ ಸಂಬಂಧಿಸಿದ ಮುಖ್ಯಶಿಕ್ಷಕರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು