ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಸಾಮಾಜಿಕ ಅಂತರವೇ ಮದ್ದು: ಜಿ.ಪಂ ಸದಸ್ಯೆ ರೂಪಶ್ರೀ ಹೇಳಿಕೆ

ಜಾಗೃತಿ ಅಭಿಯಾನ
Last Updated 3 ಏಪ್ರಿಲ್ 2020, 9:23 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಸೋಂಕು ಹರಡುವಿಕೆ ತಡೆಗೆ ಸಾಮಾಜಿಕ ಅಂತರವೇ ಮದ್ದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶುಕ್ರವಾರ ಕೋವಿಡ್‌–19 ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದೆಲ್ಲೆಡೆ ಜನ ಆತಂಕಗೊಂಡಿದ್ದಾರೆ. ದಿನ ಕಳೆದಂತೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿನ ಗಂಭೀರತೆಗೆ ಬಲಿಷ್ಠ ರಾಷ್ಟ್ರ ಅಮೆರಿಕದಲ್ಲೇ ಅಲ್ಲೋಲ ಕಲ್ಲೋಲವಾಗಿದೆ. ಜಗತ್ತಿನ ಬಹುಪಾಲು ರಾಷ್ಟ್ರಗಳು ಈ ಸೋಂಕಿನಿಂದ ಅಪಾಯದ ಸ್ಥಿತಿಗೆ ತಲುಪಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅತಿ ಜನಸಂಖ್ಯೆಯಿರುವ ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದರೆ ಅಪಾರ ಸಾವು ನೋವು ಸಂಭವಿಸುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಗಳಿಂದ ಮಾತ್ರ ಸೋಂಕು ತಡೆಯುವುದು ಸಾಧ್ಯವಿಲ್ಲ. ರೋಗ ನಿಯಂತ್ರಣಕ್ಕೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು. ಜನರು ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಗಡಿ ಅಥವಾ ಮಾರುಕಟ್ಟೆಗಳಿಗೆ ಹೋದಾಗ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಮಾಹಿತಿ ಕೊಡಿ: ‘ಪ್ರತಿಯೊಬ್ಬರೂ ದಿಗ್ಬಂಧನ ಆದೇಶ ಪಾಲಿಸಬೇಕು. ಮನೆಗಳಲ್ಲೇ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸದ್ಯ ನಗರ ಪ್ರದೇಶಕ್ಕೆ ನಗರಕ್ಕೆ ಸೀಮಿತವಾಗಿರುವ ಈ ಕಾಯಿಲೆಯು ಗ್ರಾಮೀಣ ಭಾಗದಲ್ಲಿ ಹರಡದಂತೆ ಮುನ್ನಚ್ಚರಿಕೆ ವಹಿಸಬೇಕು. ಹೊರ ಜಿಲ್ಲೆ, ರಾಜ್ಯ ಅಥವಾ ದೇಶಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು’ ಎಂದು ಮನವಿ ಮಾಡಿದರು.

‘ಹಳ್ಳಿಗಳಲ್ಲಿ ಈ ಸೋಂಕು ಹರಡಿದರೆ ರೈತರ ಬದುಕು ನರಕವಾಗುತ್ತದೆ. ಕೃಷಿ ಚಟುವಟಿಕೆ ಸ್ಥಗಿತಗೊಂಡು ಆಹಾರ ಉತ್ಪಾದನೆ ಕುಸಿಯುತ್ತದೆ. ಇದರಿಂದ ಇಡೀ ದೇಶ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸರ್ಕಾರದ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

ಮುಖಗವಸು ವಿತರಣೆ: ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಾಭಿಕೊತ್ತನೂರು, ಗುಟ್ಟಹಳ್ಳಿ, ಚಿಕ್ಕಅಯ್ಯೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಯಿತು. ಸಾರ್ವಜನಿಕರು ಹಾಗೂ ಗ್ರಾ.ಪಂ ಸಿಬ್ಬಂದಿಗೆ ಉಚಿತವಾಗಿ ಮುಖಗವಸು ವಿತರಿಸಲಾಯಿತು.

ಗ್ರಾ.ಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಶ್ರೀನಿವಾಸ್, ಪಿಡಿಒ ಅನುರಾಧಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT