ಸೋಮವಾರ, ಜೂನ್ 27, 2022
21 °C

ಸೋಂಕಿತರ ಸೇವೆಗೆ ಮುಂದಾದ ರೈತ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಕೊರೊನಾ ಎಂದರೆ ಜನ ಮಾರು ದೂರದಲ್ಲಿ ನಿಲ್ಲುವ ಸ್ಥಿತಿ ಇರುವಾಗ ಕೃಷಿಕರೊಬ್ಬರು ಸ್ವಇಚ್ಛೆಯಿಂದ ತಮ್ಮನ್ನು ಕೊರೊನಾ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲ್ಲೂಕಿನ ಚೌಡನಹಳ್ಳಿಯ ರೈತ ಶ್ರೀನಿವಾಸರೆಡ್ಡಿ ಇತ್ತೀಚೆಗೆ ಅನಾರೋಗ್ಯದಿಂದ ಪಟ್ಟಣದ ವೆಂಕಟೇಶ್ವರ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. ಅದೇ ನರ್ಸಿಂಗ್ ಹೋಂನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ಪೀಡಿತರ ಮಧ್ಯೆ ಕೆಲಸ ಮಾಡಲು ಇಷ್ಟಪಡದ ನರ್ಸಿಂಗ್ ಹೋಂನ ಕೆಲವು ಸಿಬ್ಬಂದಿ ಕೆಲಸ ಬಿಟ್ಟು ಹೋದರು. ಹೊಸಬರು ಬರಲು ಹಿಂದೇಟು ಹಾಕಿದರು. ಸಮಸ್ಯೆ ಬಿಗಡಾಯಿಸಿತು.

ಕೊರೊನಾ ಪೀಡಿತರ ಸೇವೆ ಮಾಡಲು ಒಲ್ಲದ ಸಿಬ್ಬಂದಿಯನ್ನು ಕಂಡು ಬೇಸರಗೊಂಡ ಶ್ರೀನಿವಾಸರೆಡ್ಡಿ, ತಮ್ಮ ಆರೋಗ್ಯ ಸುಧಾರಣೆ ಆದ ಮೇಲೆ ಅದೇ ನರ್ಸಿಂಗ್ ಹೋಂನಲ್ಲಿ ಉಚಿತವಾಗಿ ಸೋಂಕಿತರ ಸೇವೆ ಮಾಡಲು ನಿರ್ಧರಿಸಿದರು.

ತಮ್ಮ ಇಚ್ಛೆಯನ್ನು ಡಾ.ವೈ.ವಿ. ವೆಂಕಟಾಚಲ ಅವರಿಗೆ ತಿಳಿಸಿದಾಗ ಆಗಬಹುದು ಎಂದರು. ಸಂಬಳ ನಿಗದಿಪಡಿಸಲು ಮುಂದಾದರು. ಹಣಕ್ಕಾಗಿ ದುಡಿಯಲು ನಿರಾಕರಿಸಿದ ರೈತ, ಉಚಿತ ಸೇವೆ ಮಾಡುತ್ತ, ರೋಗಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಶ್ರೀನಿವಾಸರೆಡ್ಡಿ ಅವರಿಗೆ ಸಾಕಷ್ಟು ತೋಟವಿದೆ. ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದಾದಾಗ, ಮನೆ ಮಂದಿ ವಿರೋಧ ವ್ಯಕ್ತಪಡಿಸಿದರು. ಆದರೆ, ಮನೆಯವರ ಮನವೊಲಿಸಿ ಕೋವಿಡ್ ನಿಯಮ ಪಾಲನೆಯೊಂದಿಗೆ ತಮ್ಮ ಸೇವೆ
ಮುಂದುವರಿಸಿದ್ದಾರೆ.

ಸೋಂಕಿತರನ್ನು ಆಂಬುಲೆನ್ಸ್‌ನಲ್ಲಿ ನರ್ಸಿಂಗ್ ಹೋಂಗೆ ಕರೆತರುವುದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುವ ರೋಗಿಗಳನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವುದು, ಅಗತ್ಯ ಬಿದ್ದಾಗ ಹೊರಗಡೆಯಿಂದ ಆಮ್ಲಜನಕದ ಸಿಲಿಂಡರ್‌ಗಳನ್ನು ತಂದುಕೊಡುವುದು ಅವರ ಕೆಲಸ.

‘ಸೋಂಕಿತರ ಸೇವೆಗೆ ನಾನು ದಿನದ 24 ಗಂಟೆಯೂ ಸಿದ್ಧ. ಸಿಬ್ಬಂದಿ ಕೊರತೆಯಿಂದ ರೋಗಿಗಳು ಒದ್ದಾಡುತ್ತಿದ್ದುದನ್ನು ನೋಡಿ, ಸಹಿಸಲಾಗದೆ ಅವರ ಸೇವೆಗೆ ಮುಂದಾಗಿದ್ದೇನೆ. ಸೇವೆಯಲ್ಲಿ ಸಿಗುವ ಸಂತೋಷ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರೀನಿವಾಸರೆಡ್ಡಿ ಜೀವದ ಮೇಲಿನ ಹಂಗು ತೊರೆದು ಧೈರ್ಯವಾಗಿ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಅವರ ನಿಸ್ಪೃಹ ಸೇವೆ ಆಸ್ಪತ್ರೆ ರೋಗಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೂ ಹೊಗಳಿಕೆಗೆ ಹಿಗ್ಗದೆ, ಸೇವೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ’ ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ವಿ. ವೆಂಕಟಾಚಲ ಅವರ ಸೇವೆಯನ್ನು ಪ್ರಶಂಸಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು