ಶುಕ್ರವಾರ, ಜನವರಿ 22, 2021
28 °C

ಗ್ರಾಮ ಶಿಕ್ಷಣ ಕಾರ್ಯಪಡೆ ರಚಿಸಿ: ಬಿಇಒ ನಾಗರಾಜಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶಿಕ್ಷಕರು ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬೇಕು. ಜತೆಗೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸೂಚಿಸಿದರು.

ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ನರಸಾಪುರ ಹಾಗೂ ವಕ್ಕಲೇರಿ ಹೋಬಳಿ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಶಿಕ್ಷಕರು ಗ್ರಾಮ ಶಿಕ್ಷಣ ಪಡೆ ರಚನೆಗೆ ಮತ್ತು ಶಾಲೆಗಳ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕು’ ಎಂದು ತಿಳಿಸಿದರು.

‘ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೂ ಇಲಾಖೆ ಸ್ಪಂದಿಸಿದೆ. ವೇತನ, ಭತ್ಯೆ ಬಿಡುಗಡೆ ಮಾಡಿದೆ. ಈಗ ಶಾಲೆಗಳು ನಡೆಯುತ್ತಿಲ್ಲ ಎಂದು ಸುಮ್ಮನಿರಬಾರದು. ಶಾಲೆಗಳ ಆವರಣ ಸ್ವಚ್ಛಗೊಳಿಸಿ ಉತ್ತಮ ಪರಿಸರ ನಿರ್ಮಿಸಬೇಕು. ಶಿಕ್ಷಕರ ಹೊಣೆಗಾರಿಕೆ ಹೆಚ್ಚಬೇಕು. ಶಾಲಾ ಅವಧಿಯಲ್ಲಿ ಶಾಲೆಯಲ್ಲೇ ಇದ್ದು, ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳು ಶಾಲೆಗೆ ಸಂತಸದಿಂದ ಬರುವ ವಾತಾವರಣ ನಿರ್ಮಿಸಬೇಕು’ ಎಂದು ಹೇಳಿದರು.

‘ಮಕ್ಕಳಿಗೆ ಅಂಕ ಗಳಿಕೆ ಜತೆಗೆ ನಿಜ ಜೀವನದಲ್ಲಿ ಬದುಕುವುದನ್ನು ಕಲಿಸಿ. ಶಿಕ್ಷಕ ವೃತ್ತಿ ಸಿಕ್ಕಿರುವುದು ಸೌಭಾಗ್ಯ. ಈ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ. ಅನ್ನ ನೀಡುತ್ತಿರುವ ಶಾಲೆಗಳ ಅಭಿವೃದ್ಧಿಗೆ ದೃಢ ಸಂಕಲ್ಪ ಮಾಡಿ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಕಿವಿಮಾತು ಹೇಳಿದರು.

‘ಗ್ರಾಮ ಪಂಚಾಯಿತಿಗಳು ಗ್ರಾಮ ಶಿಕ್ಷಣ ಪಡೆ ರಚಿಸಿದರೂ ಶಿಕ್ಷಕರು ದಾಖಲೆಪತ್ರ ನಿರ್ವಹಿಸಬೇಕು. ಶಾಲೆ ಬಿಟ್ಟು ಮನೆಯಲ್ಲಿರುವ ಮಕ್ಕಳು ಓದುವ ಬೆಳಕು ಕಾರ್ಯಕ್ರಮದಡಿ ಗ್ರಾ.ಪಂ ಗ್ರಂಥಾಲಯ ಸೇವೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡಬೇಕು. ಗ್ರಂಥಾಲಯ ಸದಸ್ಯತ್ವ ಅಭಿಯಾನ ನಡೆಸಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಸಲಹೆ ನೀಡಿದರು.

‘ಗ್ರಾ.ಪಂ ನೆರವಿನಿಂದ ಕಾಲಕಾಲಕ್ಕೆ ಮಕ್ಕಳ ಹಕ್ಕುಗಳ ಸಭೆ ನಡೆಸಿ. ಜಲಜೀವನ್ ಮಿಷನ್‌ ಅಡಿ ಶಾಲೆಗಳಲ್ಲಿನ ನೀರು ಸಂಪರ್ಕಕ್ಕೆ ₹ 20 ಸಾವಿರ ನೀಡಲಾಗುತ್ತಿದೆ. ಶಾಲಾ ಶೌಚಾಲಯ, ಅಡುಗೆ ಮನೆಗೆ ನಲ್ಲಿ ಸಂಪರ್ಕ ಪಡೆದುಕೊಳ್ಳಿ. ಇಂಗು ಗುಂಡಿ ನಿರ್ಮಾಣ, ಸಾವಯವ ಗೊಬ್ಬರ ತೊಟ್ಟಿ ನಿರ್ಮಾಣ ಮಾಡಿಸಿ. ಶಾಲೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಮಾಡಿಸಿ’ ಎಂದು ಸಲಹೆ ನೀಡಿದರು.

ಪೌಷ್ಟಿಕ ಉದ್ಯಾನ: ‘ಶಾಲೆಗಳಲ್ಲಿ ಪೌಷ್ಟಿಕ ಸಸ್ಯಗಳ ಉದ್ಯಾನ ರಚಿಸಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ. ಶಾಲೆಗಳಲ್ಲಿ ಅಡುಗೆ ಮನೆಗೆ ಅಗತ್ಯವಾದ ಗಿಡಗಳನ್ನು ಬೆಳೆಸಬೇಕು. ಅಡುಗೆ ಸಿಬ್ಬಂದಿಗೆ ಜಾಬ್‌ ಕಾರ್ಡ್‌ ಕೊಡಿಸಿ ಅವರಿಂದಲೇ ಪೌಷ್ಟಿಕ ಉದ್ಯಾನ ನಿರ್ಮಿಸಲು ಕ್ರಮವಹಿಸಿ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸಲಹೆ ನೀಡಿದರು.

ಕರ್ನಾಟಕ ಪಬ್ಲಿಕ್‌ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಪಿಡಿಒಗಳಾದ ಅಂಬರೀಷ್, ಸೋಮಶೇಖರ್, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ರಾಘವೇಂದ್ರ, ಸಿಆರ್‌ಪಿ ಗೋವಿಂದ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.