ಗುರುವಾರ , ಏಪ್ರಿಲ್ 9, 2020
19 °C
ಕೋವಿಡ್‌–19 ಭೀತಿ: ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ

ಕ್ರಿಮಿನಲ್ ಪ್ರಕರಣ: ಡಿ.ಸಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜನರಿಗೆ ಬೇಕಿರುವ ದಿನನಿತ್ಯದ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ವರ್ತಕರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ಅಗತ್ಯ ವಸ್ತುಗಳ ಮಾರಾಟಗಾರರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕು ತಡೆಗಟ್ಟುವ ಕಾರಣಕ್ಕೆ ದೇಶದೆಲ್ಲೆಡೆ 21 ದಿನಗಳ ಲಾಕ್‌ಡೌನ್‌ ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಬೇಕಿದೆ. ಇದು ಒಂದು ರೀತಿಯ ದೇಶ ಸೇವೆ’ ಎಂದು ತಿಳಿಸಿದರು.

‘ದಿನಸಿ ವಸ್ತುಗಳ ಅಗತ್ಯತೆ ಪ್ರತಿಯೊಬ್ಬರಿಗೂ ಇದೆ. ಆಹಾರ ಪದಾರ್ಥಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಜಿಲ್ಲಾಡಳಿತವು ಅಗತ್ಯ ವಸ್ತುಗಳ ಮಾರಾಟಗಾರರಿಗೆ ಸಂಪೂರ್ಣ ಸಹಕಾರ ನೀಡುತ್ತದೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ಕೊಡುತ್ತೇವೆ. ಆದರೆ, ವಹಿವಾಟಿನ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಜನರಿಗೆ ಯಾವುದೇ ಕಾರಣಕ್ಕೂ ನೊಣಗಳ ರೀತಿ ಮುತ್ತಿಕೊಳ್ಳಲು ಅವಕಾಶ ನೀಡಬೇಡಿ. ಹೆಚ್ಚು ಕಾಲ ಅಂಗಡಿ ಬಳಿ ನಿಲ್ಲಿಸಿಕೊಳ್ಳಬೇಡಿ. ಪರಿಸ್ಥಿತಿಯ ಲಾಭ ಪಡೆದು ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿದರೆ ಮುಲಾಜಿಲ್ಲದೆ ಅಂಗಡಿ ಮುಚ್ಚಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.

‘ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಪಾಸ್‌ ವಿತರಿಸಲಾಗುವುದು. ಪಾಸ್‌ ದುರ್ಬಳಕೆ ಮಾಡಿಕೊಳ್ಳಬಾರದು. ಅಡುಗೆ ಅನಿಲ ಖಾಲಿಯಾಗಿ ತೊಂದರೆಯಾಗಿದೆ ಎಂದು ಬಡ ಕುಟುಂಬಗಳು ಗಮನಕ್ಕೆ ತಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತಕ್ಷಣವೇ ಅವರಿಗೆ ಸಿಲಿಂಡರ್‌ನ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

‘ಸೂಪರ್ ಮಾರ್ಕೆಟ್‌ಗಳು ಹಾಗೂ ಮಾಲ್‌ಗಳು ದಿನದ 24 ಗಂಟೆಯೂ ವಹಿವಾಟು ನಡೆಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು. ಯಾರಿಗೇ ಯಾವುದೇ ಸಮಸ್ಯೆ ಎದುರಾದರೂ ದೂರವಾಣಿ ಕರೆ ಮಾಡಿ ತಿಳಿಸಿದರೆ ಕೂಡಲೇ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಪಾಸ್‌ ವಿತರಣೆ

‘ದಿನಸಿ ಅಂಗಡಿ, ಪೆಟ್ರೋಲ್‌ ಬಂಕ್‌, ಪತ್ರಿಕೆ ವಿತರಕರು ಮತ್ತು ಪತ್ರಿಕೆ ಹಾಕುವವರಿಗೆ ಆಯಾ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಪಾಸ್‌ ವಿತರಿಸಲಾಗುವುದು. ಪಾಸ್‌ ಪಡೆದು ಸೇವೆ ಮುಂದುವರಿಸಬೇಕು. ಪೊಲೀಸ್‌ ಸಿಬ್ಬಂದಿ ವಾಹನಗಳನ್ನು ತಡೆದರೆ ಸಹಾಯವಾಣಿ ಸಂಖ್ಯೆ 100, 112 ಅಥವಾ ಹಿರಿಯ ಪೊಲೀಸ್‌ ಅಧಿಕಾರಿಗಳ ಮೊಬೈಲ್‌ಗೆ ಕರೆ ಮಾಡಿ ತಿಳಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮನವಿ ಮಾಡಿದರು.

‘ಮಾಲ್‌ ಮತ್ತು ಸೂಪರ್‌ ಮಾರ್ಕೆಟ್‌ಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ಜನರಿಗೆ ಅಲ್ಲಿಯೇ ಹೆಚ್ಚಿನ ಸಮಯದವರೆಗೆ ಇರಲು ಅವಕಾಶ ಕೊಡಬಾರದು. ವಸ್ತುಗಳನ್ನು ಆದಷ್ಟು ಬೇಗನೆ ಖರೀದಿಸಿ ನಿರ್ಗಮಿಸಬೇಕು’ ಎಂದು ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಮಹಮ್ಮದ್‌ ಸುಜಿತಾ ಸಲಹೆ ನೀಡಿದರು.

ಕೀಟನಾಶಕ ಅತ್ಯವಶ್ಯಕ: ‘ಬೆಳೆಗಳಿಗೆ ಕೀಟನಾಶಕಗಳು ಅತ್ಯವಶ್ಯಕ. ಆದರೆ, ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ಕೀಟನಾಶಕ ಮಾರಾಟ ಮಳಿಗೆಗಳನ್ನು ಮುಚ್ಚಲಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಕೀಟನಾಶಕ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್‌, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು