ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಾಲ | ಅಕ್ರಮ ನಡೆಸಿದ್ದರೆ ರಾಜೀನಾಮೆ

Last Updated 9 ಜೂನ್ 2020, 14:07 IST
ಅಕ್ಷರ ಗಾತ್ರ

ಕೋಲಾರ: ‘ಕೆರೆ ಕುಂಟೆಗಳಿಗೆ ಬೆಳೆ ಸಾಲ ನೀಡಿರುವುದಾಗಿ ಕೆಲವರು ವೈಯಕ್ತಿಕ ದ್ವೇಷದ ಕಾರಣಕ್ಕೆ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಿ. ತಪ್ಪಾಗಿದ್ದರೆ ತಲೆ ಬಾಗುವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಅವರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಮಂಗಳವಾರ ಗೋವಿಂದಗೌಡ ಮತ್ತು ಬ್ಯಾಂಕ್‌ನ ನಿರ್ದೇಶಕರ ಜತೆ ಮಾತುಕತೆ ನಡೆಸಿದ ಸಚಿವರು, ‘ಬ್ಯಾಂಕ್‌ನ ಚಿಕ್ಕಬಳ್ಳಾಪುರದ ಮಾಜಿ ನಿರ್ದೇಶಕರೊಬ್ಬರು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕೆರೆ ಕುಂಟೆಗಳಿಗೆ ಬೆಳೆ ಸಾಲ ನೀಡಿ ಡಿಸಿಸಿ ಬ್ಯಾಂಕ್‌ನಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆಸಲಾಗಿದೆ ಎಂದು ದೂರು ಕೊಟ್ಟಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡ, ‘ರೈತರಿಗೆ ಕೋಟಿಗಟ್ಟಲೇ ಬೆಳೆ ಸಾಲ ನೀಡಲು ಅವಕಾಶವೇ ಇಲ್ಲ. ಗರಿಷ್ಠ ₹ 3 ಲಕ್ಷ ಮಾತ್ರ ಬೆಳೆ ಸಾಲ ಕೊಡಬಹುದು. ಬ್ಯಾಂಕ್‌ನ ಮಾಜಿ ನಿರ್ದೇಶಕರು ಆರೋಪಿಸಿರುವಂತೆ ಕೆರೆ ಕುಂಟೆಗಳಿಗೆ ಬೆಳೆ ಸಾಲ ನೀಡಿರುವ ಯಾವುದೇ ಪ್ರಕರಣವಿದ್ದರೆ ತನಿಖೆಗೆ ಆದೇಶಿಸಿ. ಅಕ್ರಮ ಸಾಬೀತಾದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಕಷ್ಟಪಟ್ಟು ಕಟ್ಟಿರುವ ಬ್ಯಾಂಕ್‌ಗೆ ದ್ರೋಹ ಮಾಡಿಲ್ಲ’ ಎಂದರು.

‘ಬ್ಯಾಂಕ್‌ನ 6 ವರ್ಷಗಳ ಹಿಂದಿನ ದುಸ್ಥಿತಿ ಹಾಗೂ ಸದ್ಯದ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಿ. ಬ್ಯಾಂಕ್‌ ದಿವಾಳಿಯಾಗಿ ಮುಚ್ಚುವ ಹಂತಕ್ಕೆ ಬಂದಿತ್ತು. ಸೆಕ್ಷನ್ 11ರಡಿ ಸಿಲುಕಿದ್ದ ಬ್ಯಾಂಕನ್ನು ಉಳಿಸಲು ಸಾಧ್ಯವೇ ಇರಲಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿಸಿ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವ ಆಲೋಚನೆ ನಡೆದಿತ್ತು. ಬ್ಯಾಂಕನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಶಕ್ತಿಮೀರಿ ಶ್ರಮಿಸಿದ್ದೇವೆ’ ಎಂದು ತಿಳಿಸಿದರು.

ಸುಳ್ಳು ಆರೋಪ: ‘ಬ್ಯಾಂಕ್‌ನ ಅಭಿವೃದ್ಧಿ ಸಹಿಸಲಾಗದ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬೇನಾಮಿ ಸಾಲ ನೀಡಿದ್ದರೆ ಆರೋಪ ಮಾಡಿರುವವರು ತೋರಿಸಲಿ. ತಾವೇ ಖುದ್ದು ಅಧಿಕಾರಿಗಳೊಂದಿಗೆ ಬ್ಯಾಂಕ್‌ಗೆ ಬಂದು ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ, ಹಣಕಾಸು ವಹಿವಾಟು ಹಾಗೂ ಸಾಲ ನೀಡಿಕೆ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಸಚಿವರಿಗೆ ಆಹ್ವಾನ ನೀಡಿದರು. ಆಗ ಸಚಿವರು, ‘ಮುಂದೆ ಅವಕಾಶವಾದಾಗ ಬ್ಯಾಂಕ್‌ಗೆ ಬರುತ್ತೇನೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ವೇಮಗಲ್ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT