ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯ ಮಕ್ಕಳಿಗಿಲ್ಲ ಸೈಕಲ್‌ ಭಾಗ್ಯ

ಗುತ್ತಿಗೆ ಕಂಪನಿಯ ಮೀನಮೇಷ: ಚಾತಕ ಪಕ್ಷಿಗಳಂತೆ ಕಾಯುತ್ತಿರುವ ವಿದ್ಯಾರ್ಥಿಗಳು
Last Updated 9 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ಶೈಕ್ಷಣಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳಾದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೈಕಲ್‌ ಭಾಗ್ಯವಿಲ್ಲ. ಸರ್ಕಾರದ ಹಂತದಲ್ಲಿ ಸೈಕಲ್‌ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸೈಕಲ್‌ಗಳು ವಿದ್ಯಾರ್ಥಿಗಳ ಕೈಸೇರಿಲ್ಲ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗೆ ಅಗತ್ಯವಿರುವ ಸೈಕಲ್‌ಗಳ ವಿವರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ.

ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಸೈಕಲ್‌ ಸರಬರಾಜು ಮಾಡುವ ಗುತ್ತಿಗೆ ಪಡೆದಿರುವ ಹೀರೋ ಸೈಕಲ್ಸ್‌ ಲಿಮಿಟೆಡ್ ಸೈಕಲ್‌ ವಿತರಣೆಗೆ ಮೀನಮೇಷ ಎಣಿಸುತ್ತಿದೆ. ಪ್ರತಿ ವರ್ಷ ಸೈಕಲ್‌ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ.

ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವ ಉದ್ದೇಶಕ್ಕಾಗಿ 2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್‌ ಕೊಡುವ ಯೋಜನೆ ಜಾರಿಗೊಳಿಸಲಾಯಿತು.

ನಗರಪಾಲಿಕೆಗಳ ವ್ಯಾಪ್ತಿಯ ಶಾಲಾ ಮಕ್ಕಳು, ರಿಯಾಯಿತಿ ಬಸ್‌ ಪಾಸ್‌ ಸೌಲಭ್ಯ ಪಡೆದಿರುವ ಮತ್ತು ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಮಕ್ಕಳಿಗೂ ಸೈಕಲ್‌ ವಿತರಿಸಲಾಗುತ್ತಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಗೆ ದಾಖಲಾಗುವ ಬಾಲಕರು ಹಾಗೂ ಬಾಲಕಿಯರಿಗೆ ಸೈಕಲ್‌ ಕೊಡಲಾಗುತ್ತಿದೆ.

ಪೋಷಕರಿಗೆ ಹೊರೆ: ಸಕಾಲಕ್ಕೆ ಸೈಕಲ್‌ ವಿತರಣೆಯಾಗದ ಕಾರಣ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ರಿಯಾಯಿತಿ ದರದ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಸೌಲಭ್ಯ ಪಡೆದಿದ್ದಾರೆ. ಮತ್ತೆ ಕೆಲ ವಿದ್ಯಾರ್ಥಿಗಳು ಸೈಕಲ್‌ ಸಿಗುವ ನಿರೀಕ್ಷೆಯಲ್ಲಿ ಬಸ್‌ ಪಾಸ್‌ ಮಾಡಿಸಿಕೊಂಡಿಲ್ಲ ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆದಿಲ್ಲ. ಈ ವಿದ್ಯಾರ್ಥಿಗಳು ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಮಕ್ಕಳ ಪ್ರಯಾಣ ವೆಚ್ಚ ಭರಿಸುವುದು ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗಿದೆ.

11,463 ಸೈಕಲ್‌: ಜಿಲ್ಲೆಯ ಆರು ಶೈಕ್ಷಣಿಕ ವಲಯಗಳಲ್ಲಿ 125 ಸರ್ಕಾರಿ ಶಾಲೆಗಳು ಮತ್ತು 59 ಅನುದಾನಿತ ಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5,870 ಬಾಲಕಿಯರು ಹಾಗೂ 5,593 ಬಾಲಕರು ಸೇರಿದಂತೆ ಜಿಲ್ಲೆಗೆ ಒಟ್ಟಾರೆ 11,463 ಸೈಕಲ್‌ಗಳ ಅಗತ್ಯವಿದೆ.

ಆರು ಶೈಕ್ಷಣಿಕ ವಲಯಗಳ ಪೈಕಿ ಕೆಲ ವಲಯಗಳಿಗೆ ಹೀರೋ ಸೈಕಲ್ಸ್‌ ಲಿಮಿಟೆಡ್ ಸೈಕಲ್‌ನ ಬಿಡಿ ಭಾಗಗಳನ್ನು ಪೂರೈಕೆ ಮಾಡಿದೆ. ಆದರೆ, ಆ ಬಿಡಿ ಭಾಗಗಳ ಜೋಡಣೆಯಾಗದ ಕಾರಣ ಮಕ್ಕಳಿಗೆ ಸೈಕಲ್‌ ವಿತರಿಸಿಲ್ಲ. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸದ್ಯದಲ್ಲೇ ಸೈಕಲ್‌ ವಿತರಿಸುತ್ತೇವೆ ಎಂದು ಸಬೂಬು ಹೇಳುತ್ತಾ ಕಾಲ ದೂಡುತ್ತಿದ್ದು, ವಿದ್ಯಾರ್ಥಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಅಂಕಿ ಅಂಶ.....
* 125 ಸರ್ಕಾರಿ ಪ್ರೌಢ ಶಾಲೆಗಳು
* 59 ಅನುದಾನಿತ ಪ್ರೌಢ ಶಾಲೆಗಳು
* 5,870 ಮಂದಿ ಬಾಲಕಿಯರು
* 5,593 ಮಂದಿ ಬಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT