ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಕರಿಗಳಿಗೆ ‘ಕೋಲಾರಮ್ಮ ಪಡೆ’ ಬಿಸಿ!

ಶಾಲಾ ಕಾಲೇಜುಗಳ ಬಳಿ 10 ಮಹಿಳಾ ಪೊಲೀಸರಿಂದ ನಿತ್ಯ ಗಸ್ತು, ವಿದ್ಯಾರ್ಥಿನಿಯರಿಗೆ ರಕ್ಷಣೆ
Published 12 ಜೂನ್ 2024, 7:11 IST
Last Updated 12 ಜೂನ್ 2024, 7:11 IST
ಅಕ್ಷರ ಗಾತ್ರ

ಕೋಲಾರ: ನಗರದ ಶಾಲಾ ಕಾಲೇಜುಗಳ ಬಳಿ ಅಲೆಯುತ್ತಾ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಕೋಲಾರ ಮಹಿಳಾ ಪೊಲೀಸರನ್ನು ಒಳಗೊಂಡ ‘ಕೋಲಾರಮ್ಮ ಪಡೆ’ ದುಃಸ್ವಪ್ನವಾಗಿ ಪರಿಣಮಿಸಿದೆ.

ಮಹಿಳಾ ಸರ್ಕಾರಿ ಕಾಲೇಜು, ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜು, ಅಂತರಗಂಗೆ ರಸ್ತೆ, ಟೇಕಲ್‌ ರಸ್ತೆಯ ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ಪುಂಡ ಪೋಕರಿಗಳು ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕಾರಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಈ ಪಡೆ ರಚಿಸಿದ್ದಾರೆ.

ಈ ವರೆಗೆ ಸುಮಾರು 50ರಿಂದ 60 ಯುವಕರನ್ನು ಪೊಲೀಸರು ಠಾಣೆಗೆ ಕರೆಯಿಸಿ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದ್ದಾರೆ. ಹಲವರ ಬೈಕ್‌ಗಳನ್ನು ವಶಕ್ಕೆ ಪಡೆದು ತಲೆ ಕೂದಲಿಗೆ ಕತ್ತರಿ ಹಾಕಿ ಕಳುಹಿಸಿದ್ದಾರೆ.

ಗಲ್‌ಪೇಟೆ, ನಗರ ಠಾಣೆ ಹಾಗೂ ಮಹಿಳಾ ಠಾಣೆಯ ಹತ್ತು ಮಹಿಳಾ ಪೊಲೀಸರನ್ನು ‘ಕೋಲಾರಮ್ಮ ಪಡೆ’ಗೆ ನಿಯೋಜಿಸಲಾಗಿದೆ. ಅದಕ್ಕಾಗಿ ಇಬ್ಬರಿಗೆ ಒಂದರಂತೆ ದ್ವಿಚಕ್ರ ವಾಹನ ಕೊಡಿಸಲಾಗಿದೆ. ಶಾಸಕ ಕೊತ್ತೂರು ಮಂಜುನಾಥ್‌ ಅವರು ಸಿಎಸ್‌ಆರ್‌ ಅನುದಾನದಲ್ಲಿ ಐದು ದ್ವಿಚಕ್ರ ವಾಹನ ನೀಡಿದ್ದಾರೆ ಎಂದು ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳಾ ಪೊಲೀಸರು ಬೆಳಿಗ್ಗೆ ಶಾಲಾ ಕಾಲೇಜು ಆರಂಭವಾಗುವ ಸಮಯದಲ್ಲಿ ಹಾಗೂ ಸಂಜೆ ಮುಚ್ಚುವ ಸಮಯದಲ್ಲಿ ಗಸ್ತು ತಿರುಗುತ್ತಾರೆ. ನಿತ್ಯ ಕಂಟ್ರೋಲ್‌ ರೂಮ್‌ಗೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡುತ್ತಾರೆ.

ಇದಲ್ಲದೇ, ಮಹಿಳಾ ಹಾಸ್ಟೆಲ್‌ಗಳಿಗೆ ಸಂಜೆ ಹೊತ್ತಿನಲ್ಲಿ ಭೇಟಿ ನೀಡಿ ರಕ್ಷಣೆ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಸಂಪರ್ಕ ಸಾಧಿಸಿ ಯಾವುದೇ ಸಮಸ್ಯೆ ಇದ್ದರೂ ಹೇಳಿಕೊಳ್ಳುವಂತೆ ಧೈರ್ಯ ತುಂಬುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿನಿಯರು ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. 

‘ನಿತ್ಯ ಬೆಳಿಗ್ಗೆ, ಸಂಜೆ ದ್ವಿಚಕ್ರ ವಾಹನದಲ್ಲಿ (ಸ್ಕೂಟಿ) ಗಸ್ತು ತಿರುಗುತ್ತೇವೆ. ನಮ್ಮನ್ನು ನೋಡಿ ಕೆಲ ಯುವಕರು ಓಡಿ ಹೋಗುತ್ತಾರೆ. ಹಿಂದೆಲ್ಲಾ ತರಗತಿ ಮುಗಿದರೂ ಕಾಲೇಜಿನ ಸುತ್ತಮುತ್ತಲೇ ಅಲೆಯುತ್ತಿದ್ದರು. ಈಗ ಆ ಸಂಖ್ಯೆ ಕಡಿಮೆ ಆಗಿದೆ. ನಮ್ಮ ಉದ್ದೇಶ ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ತುಂಬುವುದು, ಜೊತೆಗೆ ಜಾಗೃತಿ ಮೂಡಿಸುವುದಾಗಿದೆ’ ಎಂದು ಕೋಲಾರಮ್ಮ ಪಡೆಯ ಪೊಲೀಸರು ಹೇಳಿದರು.

ಬೃಂದಾವನ ವೃತ್ತದಿಂದ ಸೋಮೇಶ್ವರ ದೇವಸ್ಥಾನದವರೆಗೆ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾರ್ಥಿ ನಿಲಯ, ಮಹಿಳಾ ಕಾಲೇಜು, ಕೋಲಾರಮ್ಮ ದೇವಸ್ಥಾನ ಇದ್ದು, ಈ ರಸ್ತೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಓಡಾಡುತ್ತಾರೆ. ಹಾಗೆಯೇ ಬಂಗಾರಪೇಟೆ ರಸ್ತೆ, ಟೇಕಲ್‌ ರಸ್ತೆಯಲ್ಲೂ ಹೆಚ್ಚು ಶಾಲಾ ಕಾಲೇಜುಗಳಿವೆ. ಬಸ್‌ ನಿಲ್ದಾಣ, ಕೆಇಬಿ ಕಚೇರಿ ಬಳಿ, ಸರ್ವಜ್ಞ ಉದ್ಯಾನ, ಕುವೆಂಪು ಉದ್ಯಾನದಲ್ಲೂ ಯುವಕ ಯುವತಿಯರು ಅಲೆದಾಡುತ್ತಿರುತ್ತಾರೆ. ಈ ಭಾಗದಲ್ಲಿ ಪುಂಡ ಪೋಕರಿಗಳು ಹಾವಳಿ ಹೆಚ್ಚಾಗಿದ್ದು, ಸಿ.ಸಿ.ಟಿ.ವಿ.ಕ್ಯಾಮೆರಾ ಅಳವಡಿಸಿ ಪೊಲೀಸ್ ಇಲಾಖೆಯಿಂದ ಹಗಲು ಮತ್ತು ರಾತ್ರಿ ಬೀಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿನಿಯರೊಂದಿಗೆ ‘ಕೋಲಾರಮ್ಮ ಪಡೆ’ಯ ಮಹಿಳಾ ಪೊಲೀಸ್‌

ವಿದ್ಯಾರ್ಥಿನಿಯರೊಂದಿಗೆ ‘ಕೋಲಾರಮ್ಮ ಪಡೆ’ಯ ಮಹಿಳಾ ಪೊಲೀಸ್‌

ಬಾಲ ಬಿಚ್ಚಿದರೆ ಸುಮ್ಮನಿರಲ್ಲ

ಶಾಲಾ ಕಾಲೇಜುಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಕೆಲವೆಡೆ ಚುಡಾಯಿಸುತ್ತಿರುವ ಬಗ್ಗೆ ದೂರು ಬಂದಿದ್ದರಿಂದ ಮಹಿಳಾ ಪೊಲೀಸ್‌ ಪಡೆ ರಚನೆ ಮಾಡಲಾಗಿದೆ. ಇದಕ್ಕೆ ‘ಕೋಲಾರಮ್ಮ ಪಡೆ’ ಎಂದು ಹೆಸರಿಟ್ಟಿದ್ದು ತಿಂಗಳಿಂದ ಪುಂಡು ಪೋಕರಿಗಳಿಗೆ ಬಿಸಿ ಮುಟ್ಟಿಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ಮೂಡಿಸುವ ಧೈರ್ಯ ತುಂಬುವ ಕೆಲಸವನ್ನು ಈ ಪಡೆ ಮಾಡುತ್ತಿದೆ. ಹಾಗೆಯೇ ಮಾದಕ ವಸ್ತುಗಳ ಸೇವನೆ ಮಾಡುವವರ ಮೇಲೆ ಕಣ್ಣಿಟ್ಟಿದ್ದೇವೆ. ಗ್ರಾಮಾಂತರ ಪ್ರದೇಶದಲ್ಲೂ ಪುಂಡ ಪೋಕರಿಗಳಿಗೆ ಕಡಿವಾಣ ಹಾಕುತ್ತೇವೆ. ಯಾರೇ ಆಗಲಿ ಬಾಲ ಬಿಚ್ಚಿದರೆ ಸುಮ್ಮನಿರಲ್ಲ. ಅಪರಾಧ ಚಟುವಟಿಕೆ ನಿಯಂತ್ರಿಸಲು ಎಡೆಮುರಿ ಕಟ್ಟುವ ರೀತಿ ಕಾರ್ಯನಿರ್ವಹಿಸುವುದು ನಮ್ಮ ಉದ್ದೇಶ. ಎಂ.ನಾರಾಯಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ

ನಿತ್ಯ ಸಂಜೆ ಚುಡಾಯಿಸುತ್ತಿದ್ದರು...

ಸಂಜೆ ಹೊತ್ತಿನಲ್ಲಿ ಮಹಿಳಾ ಕಾಲೇಜಿನಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ನಡೆದು ಹೋಗುವಾಗ ಕೆಲ ಯುವಕರು ನಮ್ಮ ಹಿಂದೆಯೇ ಬಂದು ಚುಡಾಯಿಸುತ್ತಿದ್ದರು. ಕೆಟ್ಟದಾಗಿ ಮಾತನಾಡುತ್ತಾ ಬೈಕ್‌ನಲ್ಲಿ ವೇಗವಾಗಿ ಹೋಗುವುದು ಮತ್ತೆ ಎದುರುಗಡೆಯಿಂದ ಬರುವುದು ಮಾಡುತ್ತಿದ್ದರು. ತುಂಬಾ ಭಯವಾಗಿತ್ತು. ಶಾಸಕರು ಒಮ್ಮೆ ಕಾಲೇಜಿಗೆ ಭೇಟಿ ನೀಡಿದಾಗ ಸಮಸ್ಯೆ ಹೇಳಿಕೊಂಡಿದ್ದೆವು ಪೊಲೀಸರಿಗೂ ದೂರು ನೀಡಿದ್ದೆವು. ಈಗ ಆ ಸಮಸ್ಯೆ ಕಡಿಮೆಯಾಗಿದೆ ನಡೆದು ಹೋಗಲು ಧೈರ್ಯ ಬಂದಿದೆ ವಿದ್ಯಾರ್ಥಿನಿಯರು ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT