ಬುಧವಾರ, ಜನವರಿ 22, 2020
24 °C
ಯಳಬುರ್ಗಿಯಲ್ಲಿ ವೈಕುಂಠ ದರ್ಶನದ ಭಾಗ್ಯ

ಬಂಗಾರಪೇಟೆ: ತಮಿಳುನಾಡಿನಿಂದ ತಂದಿರುವ ವೆಂಕಟೇಶ್ವರ ಸ್ವಾಮಿಯ ದಶಾವತಾರ ದರ್ಶನ

ಕಾಂತರಾಜ್ Updated:

ಅಕ್ಷರ ಗಾತ್ರ : | |

prajavani

ಬಂಗಾರಪೇಟೆ: ವೆಂಕಟೇಶ್ವರನ ದಶಾವತಾರ ರೂಪಗಳ ಮಾದರಿ, ದೇವತೆಗಳಿಂದಲೇ ಸಂಗೀತ ವಾದ್ಯ, ಸಮುದ್ರ ಚಿಪ್ಪಿನಿಂದ ಬಾಲಕೃಷ್ಣ ಇಣುಕುವ ನೋಟ, ಹೂವಿಂದಲೇ ವೈಕುಂಠ ಏಕಾದಶಿ ಎಂದು ಬಿಡಿಸಿರುವ ಪರಿ ಭೂಲೋಕದಲ್ಲಿ ವೈಕುಂಠ ಸದೃಶ್ಯವಾದಂತಿದೆ.

ಈ ವೈಭವ ಕಂಡುಬಂದಿದ್ದು ಬಂಗಾರಪೇಟೆ ತಾಲ್ಲೂಕಿನ ಯಳಬುರ್ಗಿ ಗ್ರಾಮದ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ. ವೈಕುಂಠ ಏಕಾದಶಿ ಪ್ರಯುಕ್ತ ಇಲ್ಲಿ ಪ್ರತಿವರ್ಷ ವಿಶೇಷ ಉತ್ಸವ ನಡೆಯಲಿದ್ದು, ಸುಮಾರು 70 ಸಾವಿರ ಭಕ್ತರು ಭಕ್ತಿಯಲ್ಲಿ ಮಿಂದೇಳುತ್ತಾರೆ.

ದೇಗುಲ ಪ್ರವೇಶ ದ್ವಾರದ ಎಡಕ್ಕೆ ಚಲಿಸಿದಂತೆ ವೆಂಕಟೇಶ್ವರ ಸ್ವಾಮಿಯ ದಶವಾತಾರ ಮಾದರಿ ವೃತ್ತಾಕಾರದಲ್ಲಿ ಸುತ್ತುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ತಮಿಳುನಾಡಿನಿಂದ ತರಿಸಲಾಗಿದೆ. ಅಲ್ಲಿಂದ ಎರಡು ಹೆಜ್ಜೆ ಹಾಕಿದರೆ ಎಡಕ್ಕೆ ಲಕ್ಷ್ಮಿ, ಬಲಕ್ಕೆ ಸರಸ್ವತಿ ಪ್ರತಿಮೆಗಳು ಗಮನ ಸೆಳೆಯುತ್ತವೆ. ಮುಂದೆ ದೇಗುಲದ ಪ್ರಾಂಗಣದಲ್ಲಿನ ವೈಕುಂಠ ದ್ವಾರಗಳನ್ನು ದಾಟಿದರೆ ಕಾಮದೇನು ಗೋಚರಿಸುತ್ತದೆ. ಅಲ್ಲಿ ಕಾಮದೇನು ಲಿಂಗಾಕೃತಿಯಲ್ಲಿರುವ ಈಶ್ವರನಿಗೆ ಹಾಲು ಉಣಿಸುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ.

ವೈಕುಂಠ ದ್ವಾರಗಳು ದಾಟುವ ಸಂದರ್ಭ ಎಡಕ್ಕೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರುಶುರಾಮ, ರಾಮ, ಬಲರಾಮ, ಕಲ್ಕಿ ಮತ್ತು ಕೃಷ್ಣನ ಮೂರ್ತಿಗಳಿವೆ. ಅಲ್ಲಿಂದ ಉತ್ತರಕ್ಕೆ ತಿರುಗಿದರೆ ಶೇಷನ ಮೇಲೆ ವಿಶ್ರಮಿಸುತ್ತಿರುವ ಗೋವಿಂದರಾಲು ಮಾದರಿ ಆಕರ್ಷಣೆಯಾಗಿದೆ. ದೇಗುಲದ ಒಳಗೆ ವೈಕುಂಠ ದ್ವಾರದೊಳಗೆ ರಾಧಾ ರುಕ್ಮಿಣಿ ಜತೆಗಿನ ಕೃಷ್ಣನ ವಿಗ್ರಹ, ಉತ್ತರಕ್ಕೆ ಗರುಡ ವಿಗ್ರಹಗಳಿವೆ. ಅಂತಿಮವಾಗಿ ಗರ್ಭಗುಡಿಯಲ್ಲಿನ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರನ ದರ್ಶನ ಭಾಗ್ಯ ಸಿಗಲಿದೆ.


ಕಲ್ಬುರ್ಗಿ ಗ್ರಾಮದ ವೆಂಕಟೇಶ್ವರ ದೇಗುಲದಲ್ಲಿ ಪ್ರತಿಷ್ಟಾಪಿಸಿರುವ ಕೃಷ್ಣನ ದಶಾವತಾರ ಮಾದರಿ

ಸುಮಾರು ಏಳೆಂಟು ಶತಮಾನದಷ್ಟು ಇತಿಹಾಸ ಹೊಂದಿರುವ ಈ ದೇಗುಲವನ್ನು ಚೋಳರ ಕಾಲದಲ್ಲಿ ನಿರ್ಮಿಸಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ. ಇಲಾಖೆ ಅನುಮತಿಯಿಂದಲೇ ಕಾರಹಳ್ಳಿಯ ಧರ್ಮದರ್ಶಿ ದಿವಂಗತ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೇಸ್ತ್ರಿ ಶ್ರೀನಿವಾಸ್ ಅವರು ಜೀರ್ಣೋದ್ಧಾರ ಮಾಡಿ, ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವುದು ತಿಮ್ಮಾಪುರ ಗ್ರಾಮದ ನಂಜಪ್ಪ ಅವರ
ನುಡಿ.

2013ರಲ್ಲಿ ₹ 1.30 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದೆ. ತಿರುಪತಿ ಮಾದರಿಯಲ್ಲಿಯೇ ಇಲ್ಲಿ ವೈಕುಂಠ ಏಕಾದಶಿ ಕೈಂಕರ್ಯ ನಡೆಸಬೇಕು ಎನ್ನುವುದು ಮುನಿಸ್ವಾಮಿ ಅವರ ಇಂಗಿತವಾಗಿತ್ತು. ಅವರ ಆಸೆಯಂತೆ ಅವರ ತಮ್ಮ ಮೇಸ್ತ್ರಿ ಶ್ರೀನಿವಾಸ್ ಅವರು ದೇಗುಲದ ಅಭಿವೃದ್ಧಿ ಹಾಗೂ ನಿತ್ಯ ಪೂಜೆಗೆ ಹೆಗಲು ಕೊಟ್ಟಿದ್ದಾರೆ.

ಧರ್ಮದರ್ಶಿ ದಿವಂಗತ ಎಸ್.ಮುನಿಸ್ವಾಮಿ ಅವರು ಕಲ್ಬುರ್ಗಿ ವೆಂಕಟೇಶರ ದೇಗುಲ, ಚೌಡೇಶ್ವರಿ ದೇಗುಲ ಸೇರಿದಂತೆ 18 ದೇಗುಲಗಳ ಜೀರ್ಣೋದ್ಧಾರ ಮಾಡಿದ್ದಾರೆ. ಅವರ ಆದರ್ಶ ನಮಗೆ ದಾರಿದೀಪ ಎನ್ನುತ್ತಾರೆ ದೇಗುಲದ ವ್ಯವಸ್ಥಾಪಕರಾದ ಕೆ.ಪಿ.ಶ್ರೀನಿವಾಸ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು