ಗುರುವಾರ , ಸೆಪ್ಟೆಂಬರ್ 19, 2019
21 °C
ಪಿ ನಂಬರ್‌ ದುರಸ್ತಿಗೆ ಲಂಚ: ಶಾಸಕ ಶ್ರೀನಿವಾಸಗೌಡ ಆಕ್ರೋಶ

ಕಂದಾಯ ಇಲಾಖೆಯಲ್ಲಿ ಹಗಲು ದರೋಡೆ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಪಿ ನಂಬರ್ ತೆಗೆಯುವ ಕಾರ್ಯದಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜಮೀನುಗಳ ಪಿ ನಂಬರ್‌ ಸಮಸ್ಯೆ ಸಂಬಂಧ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಿ ನಂಬರ್ ದುರಸ್ತಿಯು ಹಣ ಮಾಡುವ ದಂಧೆಯಾಗಿದ್ದು, ರೈತರನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಸಾವಿರಾರು ರೈತರ ಜಮೀನುಗಳ ಪಿ ನಂಬರ್‌ಗಳು ಹಾಗೆಯೇ ಉಳಿದಿವೆ. ರೈತರ ಪಹಣಿಗಳಲ್ಲಿ ಪಿ ನಂಬರ್‌ ಬಂದಿರುವುದರಿಂದ ಅದನ್ನು ಮಾರಾಟ ಮಾಡಲು ಮತ್ತು ಇತರೆ ವ್ಯವಹಾರ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.

‘ಸರ್ಕಾರ ನಾಲ್ಕೈದು ವರ್ಷಗಳಿಂದ ಪೋಡಿ ಅದಾಲತ್ ನಡೆಸಿ ರೈತರ ಪಹಣಿಗಳಲ್ಲಿ ಅಡಕವಾಗಿರುವ ಪಿ ನಂಬರ್‌ ತೆಗೆಯುವಂತೆ ಸೂಚನೆ ನೀಡುತ್ತಲೇ ಬಂದಿದೆ. ಆದರೆ, ಜಿಲ್ಲೆಯಲ್ಲಿ ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಕಾಲದಿಂದಲೂ ಈ ಬಗ್ಗೆ ಪ್ರಸ್ತಾಪ ಆಗುತ್ತಿದೆ. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ಕುಮಾರ್ ಸಹ ಪಿ ನಂಬರ್‌ಗಳಿಂದ ರೈತರಿಗೆ ಆಗುತ್ತಿರುವ ತೊಂದರೆ ಮನಗಂಡು ಸಮಸ್ಯೆ ಪರಿಹಾರಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ’ ಎಂದು ಆರೋಪಿಸಿದರು.

ಕೊಳ್ಳೆ ಹೊಡೆಯುತ್ತಿದ್ದಾರೆ: ‘ಅಧಿಕಾರಿಗಳು ಪಿ ನಂಬರ್ ತೆಗೆಯುವ ನೆಪದಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ತಾಲ್ಲೂಕು ಕಚೇರಿ, ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿ ಇದರ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಒಂದು ಹೆಕ್ಟೇರ್‌ಗೆ ₹ 4 ಲಕ್ಷದವರೆಗೆ ಲಂಚ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲಂಚ ಪಡೆಯುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅಂತಹ ಭ್ರಷ್ಟರನ್ನು ಜಿಲ್ಲೆಯಿಂದಲೇ ಹೊರ ಹಾಕಬೇಕು’ ಎಂದು ಗುಡುಗಿದರು.

‘ಪಿ ನಂಬರ್ ಹೆಸರಿನಲ್ಲಿ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳ ಅಕ್ರಮಕ್ಕೆ ಕಡಿವಾಣ ಹಾಕಿ ಜಿಲ್ಲೆಯಾದ್ಯಂತ ಅದಾಲತ್‌ ಮಾದರಿಯಲ್ಲಿ ಪಿ ನಂಬರ್ ತೆಗೆಯುವ ಕೆಲಸ ಮಾಡುವಂತೆ ಕೋರಿದ್ದೇನೆ’ ಎಂದು ವಿವರಿಸಿದರು.

ತಾಯಿ ಇದ್ದಂತೆ: ‘ಕಂದಾಯ ಇಲಾಖೆಯು ಎಲ್ಲಾ ಇಲಾಖೆಗಳಿಗೆ ತಾಯಿ ಇದ್ದಂತೆ. ಸಾರ್ವಜನಿಕರ ಎಲ್ಲಾ ಕೆಲಸ ಕಾರ್ಯ ಈ ಇಲಾಖೆಯಲ್ಲೇ ನಡೆಯಬೇಕು. ಪಹಣಿಯಿಂದ ಹಿಡಿದು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಈ ಇಲಾಖೆಗೆ ಬರುತ್ತಾರೆ. ಅವರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಧಿಕಾರಿಗಳ ಮನಸ್ಥಿತಿ ಬದಲಾಗದಿದ್ದರೆ ತಕ್ಕ ಶಾಸ್ತಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

Post Comments (+)