ಶನಿವಾರ, ಡಿಸೆಂಬರ್ 3, 2022
26 °C
ಕೆಜಿಎಫ್‌ ನಗರಸಭೆಯ ಸಾಮಾನ್ಯ ಸಭೆ : ಡಿ.ಸಿ, ಅಬಕಾರಿಗೆ ಪತ್ರ

ಮದ್ಯದಂಗಡಿ ಮುಚ್ಚಲು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ನಗರಸಭೆ ಅನುಮತಿ ಪಡೆಯದೆ ಮದ್ಯದ ಅಂಗಡಿಗೆ ಅಬಕಾರಿ ಇಲಾಖೆ ಅನುಮತಿ ನೀಡಿದ ಬಗ್ಗೆ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ನಗರಸಭೆ ಅನುಮತಿ ಇಲ್ಲದೆ ಅಬಕಾರಿ ಇಲಾಖೆಯು ನಗರಸಭೆ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳ ಪರವಾನಗಿ ನವೀಕರಿಸಿದೆ
ಎಂದರು.

ಇದಕ್ಕೆ ದನಿಗೂಡಿಸಿದ ಸದಸ್ಯರಾದ ಎಸ್.ರಾಜೇಂದ್ರನ್ ಮತ್ತು ರಮೇಶ ಕುಮಾರ್, ನಗರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಗರಸಭೆಯಲ್ಲಿ ದೊಡ್ಡ ಹಗಹರಣ ನಡೆಯುತ್ತಿದೆ ಎಂದು ದೂರಿದರು.

ಅಬಕಾರಿ ಇಲಾಖೆಗೆ ನಗರಸಭೆ ಲೆಕ್ಕಕ್ಕೆ ಇಲ್ಲವಾ? ಇದು ನಗರಸಭೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚುವುದಕ್ಕೆ ನಗರಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿತು. ಈ ಸಂಬಂಧವಾಗಿ ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆಗೆ ಪತ್ರ ಬರೆಯಲು
ತೀರ್ಮಾನಿಸಲಾಯಿತು.

ಸಲೂನ್ ಅಂಗಡಿಗೆ ಪರವಾನಗಿ ನೀಡಲು ನಾಲ್ಕು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇದುವರೆವಿಗೂ ಪರವಾನಿಗೆ ನೀಡಿಲ್ಲ. ನಿಮಗೆ ಜವಾಬ್ದಾರಿ ಇಲ್ಲವಾ? ಬಡವರಿಗೆ ಎನ್ನೆಷ್ಟು ಸತಾಯಿಸುತ್ತೀರಿ ಎಂದು ಅಧ್ಯಕ್ಷರ ವಿರುದ್ಧ ಸದಸ್ಯ ಕೋದಂಡನ್ ಕಿಡಿಕಾರಿದರು.

ನಗರಸಭೆ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ. ಕ್ರೀಡಾಂಗಣದೊಳಗೆ ಹೋದರೆ ಕ್ರೀಡಾಪಟುಗಳು ಬಿದ್ದು ಗಾಯಗೊಳ್ಳುತ್ತಾರೆ. ಅದನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷೆ ದೇವಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ವಿನಾಯಕ, ಎಇಇ ಮಂಜುನಾಥ್ ಇದ್ದರು.

ಬಾಡಿಗೆ ವಸೂಲಿಗೆ ಕಡಿವಾಣ ಹಾಕಿ

ಎಂ.ಜಿ.ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳಿಂದ ದಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಅವರಿಗೆ ಕಡಿವಾಣ ಹಾಕಿ. ಬೀದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ರಾಜೇಂದ್ರನ್ ಒತ್ತಾಯಿಸಿದರು.

ಎಂ.ಜಿ.ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ನಿಖರವಾದ ಪಟ್ಟಿಯನ್ನು ಪಡೆಯಲು ವಾಣಿಜ್ಯ ತೆರಿಗೆ ಕಚೇರಿ ಮತ್ತು ಬೆಸ್ಕಾಂ ಕಚೇರಿಗೆ ಪತ್ರ ಬರೆಯಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತೆ ಡಾ.ಕೆ.ಮಾಧವಿ ಮಾಹಿತಿ ನೀಡಿದರು.

ಅಂಗಡಿ ಮುಚ್ಚಿಸಲು ಪೊಲೀಸರಿಗೆ ಅಧಿಕಾರ ಇದೆಯೇ ?

ಹತ್ತು ದಿನಗಳಿಂದ ದನದ ಮಾಂಸದ ಅಂಗಡಿಗೆ ಬೀಗ ಹಾಕಲಾಗಿದೆ. ಅವರಿಗೆ ವ್ಯಾಪಾರ ಮಾಡದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಅಂಗಡಿ ಮುಚ್ಚಿಸಲು ಪೊಲೀಸರಿಗೆ ಅಧಿಕಾರ ಇಲ್ಲ. ಬಿಜೆಪಿ, ಆರೆಸ್ಸೆಸ್ಸ್‌ ನವರಿಗೆ ಬೇಡ ಎಂದರೆ ಜನರಿಗೆ ಬೇಡವಾ? ಎಂದು ಜಯಪಾಲ್ ಪ್ರಶ್ನಿಸಿದರು.

ನಗರಸಭೆಯಿಂದ ಕೋಳಿ, ಕುರಿ ಮಾಂಸದ ಅಂಗಡಿಗೆ ಅನುಮತಿ ನೀಡಲಾಗಿದೆ. ದನದ ಮಾಂಸದ ಅಂಗಡಿಗೆ ಅನುಮತಿ ಕೊಟ್ಟಿಲ್ಲ. ಕೆಲವು ಸಂಘಟನೆಗಳು ದನದ ಮಾಂಸದ ವ್ಯಾಪಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದಸ್ಯರು ಬರುವುದಾದರೆ ಎಸ್ಪಿ ಬಳಿ ಹೋಗಿ ನ್ಯಾಯ ಕೇಳೋಣ ಎಂದು ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು