ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತ : ಶ್ರೀನಿವಾಸ್ ಕಳವಳ

ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಕಳವಳ
Last Updated 27 ಡಿಸೆಂಬರ್ 2019, 9:56 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಸ್ವರ್ಣ ಭೂಮಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸ್ವರ್ಣ ಭೂಮಿ ಪ್ರತಿಷ್ಠಾನವು ತಾಲ್ಲೂಕಿನ ಹೂಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸರ್ಕಾರಿ ಶಾಲೆಗಳ ಉಳಿವಿಗಾಗಿ ನಾವು -ನೀವು’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರವು ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯ ಕೊಟ್ಟರೂ ಮಕ್ಕಳ ದಾಖಲಾತಿ ಕುಸಿಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಚೆನ್ನಾಗಿದೆ. ಕೆಲ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಣೆ ಪ್ರಯತ್ನ ನಡೆದಿದೆ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆಯಿದ್ದು, ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕೀಳರಿಮೆ ಹೋಗಲಾಡಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

‘ಪೋಷಕರು ಮತ್ತು ಮಕ್ಕಳಲ್ಲಿ ಖಾಸಗಿ ಶಾಲಾ ವ್ಯಾಮೋಹ ಹೆಚ್ಚಿದೆ. ಈ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಅಸಮಾನತೆ ಹೆಚ್ಚುತ್ತದೆ. ಸಮಾನ ಶಿಕ್ಷಣದ ಪರಿಕಲ್ಪನೆಗೆ ಹೊಡೆತ ಬೀಳುತ್ತದೆ. ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಬರುವಂತೆ ಮಾಡಬೇಕು. ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಕೀಳರಿಮೆ ಇರಬಾರದು. ದೇಶದ ಅನೇಕ ಮಹನೀಯರು ಸರ್ಕಾರಿ ಶಾಲೆಗಳಲ್ಲೇ ಓದಿ ದೊಡ್ಡ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರಿರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಕೈಜೋಡಿಸಬೇಕು: ‘ಸಮುದಾಯ ಎಚ್ಚೆತ್ತುಕೊಂಡರೆ ಸರ್ಕಾರಿ ಶಾಲೆಗಳ ಉಳಿಸಬಹುದು. ಸ್ವಚ್ಛತೆ, ಶಾಲೆಯ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಸಾರ್ವಜನಿಕರು ಶಿಕ್ಷಣ ಇಲಾಖೆ ಜತೆ ಕೈಜೋಡಿಸಬೇಕು’ ಎಂದು ಸ್ವರ್ಣ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಶಿವಕುಮಾರ್ ಮನವಿ ಮಾಡಿದರು.

‘ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಪ್ರತಿಷ್ಠಾನವು ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡುತ್ತಿದೆ. ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ, ಲೇಖನಿ ಸಾಮಗ್ರಿ ವಿತರಿಸಲಾಗುತ್ತಿದೆ’ ಎಂದು ವಿವರಿಸಿದದರು.

ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರ ನಾಗರಾಜ್, ಸ್ವರ್ಣ ಭೂಮಿ ಪ್ರತಿಷ್ಠಾನದ ನಿರ್ದೇಶಕ ಅರವಿಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT