ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ ‌| ತಂಜಾವೂರು ಹುಲ್ಲು: ಕುದುರಿದ ಬೇಡಿಕೆ

ಕೆಜಿಎಫ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲ್ಲು ಖರೀದಿಗೆ ರೈತರ ಒಲವು
ಕೃಷ್ಣಮೂರ್ತಿ
Published : 6 ಆಗಸ್ಟ್ 2024, 6:34 IST
Last Updated : 6 ಆಗಸ್ಟ್ 2024, 6:34 IST
ಫಾಲೋ ಮಾಡಿ
Comments

ಕೆಜಿಎಫ್: ಹಸುಗಳಿಗೆ ಅತ್ಯಂತ ಪ್ರಿಯವಾದ ‘ತಂಜಾವೂರು ಹುಲ್ಲು’ ಖರೀದಿಗೆ ರೈತರು ಮುಗಿಬೀಳುತ್ತಿದ್ದಾರೆ. ಇದರಿಂದಾಗಿ ಈ ಮೇವು ಮಾರುಕಟ್ಟೆ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ.

ತಮಿಳುನಾಡಿನ ತಂಜಾವೂರಿನಿಂದ ಪ್ರತಿನಿತ್ಯ ನಾಲ್ಕರಿಂದ ಐದು ಲೋಡ್ ಹುಲ್ಲು ಕೆಜಿಎಫ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಬರುತ್ತಿದೆ. ಪಾರಾಂಡಹಳ್ಳಿ ಮತ್ತು ಸ್ವರ್ಣ ನಗರದಲ್ಲಿ ಹುಲ್ಲು ಮಾರುವ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. 

ಮಳೆ ಇಲ್ಲದೆ ಬರಗಾಲ ಎದುರಿಸುತ್ತಿರುವ ತಾಲ್ಲೂಕಿನ ಜಾನುವಾರು ಮಾಲೀಕರಿಗೆ ತಂಜಾವೂರು ಹುಲ್ಲು ವರದಾನವಾಗಿದೆ. ಒಂದು ಬಂಡಲ್ ಹುಲ್ಲು ₹350– ₹400ವರೆಗೆ ಮಾರಾಟವಾಗುತ್ತಿದೆ. ನಾಲ್ಕು ಹಸುಗಳಿದ್ದರೆ ದಿನಕ್ಕೆ ಎರಡು ಬಂಡಲ್ ಹುಲ್ಲು ಬೇಕಾಗುತ್ತದೆ. ಅನುಕೂಲವಿದ್ದವರು ತಮ್ಮ ಜಾನುವಾರುಗಳಿಗೆ ದಿನವಿಡೀ ಹಸಿರು ಹುಲ್ಲು ಮೇಯಲು ಬಿಡುತ್ತಾರೆ. ಸಂಜೆ ನಂತರ ಕೊಟ್ಟಿಗೆಯಲ್ಲಿ ಒಣ ಹುಲ್ಲು ಹಾಕುತ್ತಾರೆ. ಈ ಹುಲ್ಲಿನಿಂದ ಹಾಲಿನ ಉತ್ಪತ್ತಿಯೂ ವೃದ್ಧಿಯಾಗುತ್ತದೆ ಎಂಬ ಕಾರಣಕ್ಕೆ ಈ ಹುಲ್ಲು ಖರೀದಿಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. 

ತಮಿಳುನಾಡಿನಿಂದ ಹುಲ್ಲು ಹೊತ್ತು ಬರುವ ಲಾರಿಗಳು ಗಡಿಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ಲಾರಿಯನ್ನು ಅಡ್ಡಗಟ್ಟುವ ರೈತರು, ಎಲ್ಲ ಹುಲ್ಲನ್ನು ಖರೀದಿಸುತ್ತಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಪ್ರಗತಿಪರ ರೈತ ಸುರೇಶ್, ‘ತಂಜಾವೂರು ಜಿಲ್ಲೆಯ ಕಾವೇರಿ ಕಣಿವೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತವನ್ನು ಯಂತ್ರದ ಮೂಲಕ ಕಟಾವು ಮಾಡಲಾಗುತ್ತದೆ. ನಂತರ ಅದನ್ನು ಯಂತ್ರದ ಸಹಾಯದಿಂದಲೇ ಬಂಡಲ್ ಕಟ್ಟಲಾಗುವುದು. ಒಣಗಿದ ಹುಲ್ಲು ಹೆಚ್ಚಿನ ದಿನ ಬಾಳಿಕೆ ಬರಲಿದೆ ಎಂಬ ಕಾರಣಕ್ಕೆ ಕಟಾವು ಮಾಡಿದ ಬಳಿಕ ಕೆಲವು ದಿನಗಳ ಕಾಲ ಹುಲ್ಲನ್ನು ಒಣಗಿಸಲಾಗುತ್ತದೆ. ಒಂದು ವೇಳೆ ರೈತರು ಖರೀದಿಸಿದ ಹುಲ್ಲು ಹಸಿಯಾಗಿದ್ದರೆ, ಅದನ್ನು ತಮ್ಮ ಜಾಗದಲ್ಲೇ ಒಣಗಲು ಹಾಕುತ್ತಾರೆ’ ಎಂದು ತಿಳಿಸಿದರು. 

ತಾಲ್ಲೂಕಿನಾದ್ಯಂತ ಹುಲ್ಲಿನ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಬಹುತೇಕ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹುಲ್ಲು ದಾಸ್ತಾನು ಮಾಡಿ ಮಾರಾಟ ಮಾಡುವ ಸಂಖ್ಯೆಯೂ ಹೆಚ್ಚಾಗಿದೆ. ತಂಜಾವೂರಿನಲ್ಲಿ ಹುಲ್ಲಿನ ಉದ್ಯಮ ಹೆಸರುವಾಸಿ. ಹುಲ್ಲು ಖರೀದಿಸಬೇಕಾದರೆ, ಕನಿಷ್ಠ ಎರಡು ದಿನವಾದರೂ ಕಾಯಬೇಕು. ನೇರವಾಗಿ ಖರೀದಿ ಮಾಡಿದರೆ, ಬಂಡಲ್ ಒಂದಕ್ಕೆ ನೂರು ರೂಪಾಯಿ ಉಳಿಸಬಹುದು ಎಂದು ಪ್ರಗತಿಪರ ರೈತ ಸುರೇಶ್ ಹೇಳಿದರು. 

ತಾಲ್ಲೂಕಿನಲ್ಲಿ ಈಗ ಕೃಷಿಯೇತರ ಚಟುವಟಿಕೆಯಾಗಿ ಹೈನುಗಾರಿಕೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಜನರು ಉತ್ತಮ ಜಾತಿಯ ಹಸುಗಳನ್ನು ಸಾಕುತ್ತಿದ್ದಾರೆ. ಹಸುವಿದ್ದರೆ ವಾರಕ್ಕೊಮ್ಮೆ ದುಡ್ಡು ನೋಡಬಹುದು. ರೈತರ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ. ಹೀಗಾಗಿ, ಹಸಿರು ಹುಲ್ಲಿನ ಜೊತೆಗೆ ತಮಿಳುನಾಡಿನ ಹುಲ್ಲನ್ನು ರೈತರು ದಾಸ್ತಾನು ಮಾಡಿಕೊಳ್ಳುತ್ತಾರೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ನಾಯಕ್ ಹೇಳುತ್ತಾರೆ.

ತಮಿಳುನಾಡಿನ ಹುಲ್ಲಿನಲ್ಲಿ ಯೂರಿಯಾ ಅಂಶವಿದ್ದು, ಹಸುಗಳಲ್ಲಿ ಹಾಲು ಉತ್ಪಾದನೆ ಜಾಸ್ತಿಯಾಗುತ್ತದೆ. ಹುಲ್ಲಿನಲ್ಲಿ ಯೂರಿಯಾ ಅಂಶ ಪ್ರಮಾಣ ಕಡಿಮೆ ಇದ್ದರೆ ಹಾಲಿನ ಪ್ರಮಾಣ ಕಡಿಮೆಯಾಗಬಹುದು ಎಂದು ಅವರು ಮಾಹಿತಿ ನೀಡಿದರು. 

ಗುಟ್ಟಹಳ್ಳಿಯ ಸರ್ಕಾರಿ ಗೋಶಾಲೆಯಲ್ಲಿ ಹಾಕಲಾಗಿರುವ ಹುಲ್ಲಿನ ರಾಶಿ
ಗುಟ್ಟಹಳ್ಳಿಯ ಸರ್ಕಾರಿ ಗೋಶಾಲೆಯಲ್ಲಿ ಹಾಕಲಾಗಿರುವ ಹುಲ್ಲಿನ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT