ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಕ್ರಮಕ್ಕೆ ಒತ್ತಾಯ

ಬಲಿಜ ಸಮುದಾಯದ ಮುಖಂಡರಿಂದ ಧರಣಿ
Last Updated 24 ಫೆಬ್ರುವರಿ 2020, 13:51 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರಿನ ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್‌ನ ಆಸ್ತಿಯನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಲಿಜ ಸಂಘದ ಸದಸ್ಯರು ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ರಾಜ್ಯ ಬಲಿಜ ಸಂಘದ ನಿರ್ದೇಶಕ ವೆಂಕಟಸ್ವಾಮಿ ಮಾತನಾಡಿ, ‘ಶಿವರಾಮೇಗೌಡ ಸಮುದಾಯವನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಇದು ಗೌರವತರುವಂತದಲ್ಲ. ಕೂಡಲೇ ಕ್ಷಮೆಯಾಚಿಸಬೇಕು’ ಎಂದರು.

‘ಟ್ರಸ್ಟ್ ಜಾಗವನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅತಿಕ್ರಮಿಸಿಕೊಂಡು ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಟ್ರಸ್ಟ್‌ನ ನಿಯಮ ಗಾಳಿಗೆ ತೂರಿ ಸುಮಾರ ₨ 8 ಕೋಟಿ ಬಾಡಿಗೆ ಬಾಕಿ ಉಳಿಸಿಕೊಂಡು ವಂಚಿಸಿದ್ದಾರೆ. ಟ್ರಸ್ಟ್ ಪದಾಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ದಾಖಲಿಸಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಶಿವರಾಮೇಗೌಡ ಬೆಂಬಲಿಗರು ಬಲಿಜ ಹಾಸ್ಟೆಲ್ ಮುಂಭಾಗದಲ್ಲಿ ದಾಂಧಲೆ ಎಬ್ಬಿಸಿ ಸಮುದಾಯದ ವಿರುದ್ಧ ಧಿಕ್ಕಾರ ಕೂಗುವಾಗ ಮೂವರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡಿದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಮಾಜಿ ಸದಸ್ಯ ರೌತ್ ಶಂಕರಪ್ಪ ಮಾತನಾಡಿ, ‘ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್ ಸಾರ್ವತ್ರಿಕ ಧರ್ಮ ಸಂಸ್ಥೆಯಾಗಿದೆ. ಉಚಿತ ವಿದ್ಯಾರ್ಥಿನಿಲಯದಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲಮೋ ಸೇರಿದಂತೆ ವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳು ಆಶ್ರಯಪಡೆದಿದ್ದಾರೆ’ ಎಂದರು.

‘ಎಲ್.ಆರ್.ಶಿವರಾಮೇಗೌಡ ದತ್ತಿ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪದಾಧಿಕಾರಿಗಳೊಂದಿಗೆ ಶಾಮೀಲಾಗಿ ವಾಣಿಜ್ಯ ಉದ್ದೇಶಕ್ಕೆ ಟ್ರಸ್ಟಿನ ಕಟ್ಟಡವನ್ನು ಅನಧಿಕೃತವಾಗಿ ಗುತ್ತಿಗೆ ಕರಾರು ಪತ್ರವನ್ನು ನೋಂದಾಯಿಸಿಕೊಂಡಿದ್ದಾರೆ. ಟ್ರಸ್ಟ್ ಕಟ್ಟಡಕ್ಕೆ ಸೇರಿದ ಉಳಿದ ಭಾಗವನ್ನು ಅತಿಕ್ರಮಿಸಿಕೊಂಡು ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ಬಲಿಜ ಸಮುದಾಯದ ಮುಖಂಡರಾದ ರವೀಂದ್ರ ಕುಮಾರ್, ವರದಪ್ಪ, ಅಶ್ವಥ್ ನಾರಾಯಣ್, ಕೃಷ್ಣಯ್ಯ ಶೆಟ್ಟಿ, ಮಹೇಶ್ ಬಾಬು, ಎಂ.ಎಸ್.ಮಹೇಶ್ ಬಾಬು, ಸಂತೋಷ ಕುಮಾರ್, ಎಸ್.ಸುರೇಶ್, ಲಕ್ಷ್ಮಣ್, ರಮೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT