ಶನಿವಾರ, ಸೆಪ್ಟೆಂಬರ್ 18, 2021
30 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ತಾಕೀತು

ಠೇವಣಿ ಸಂಗ್ರಹ, ನಿಷ್ಠೆ ಸಾಕ್ಷೀಕರಿಸಿ: ಎಂ.ಗೋವಿಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅನ್ನ ನೀಡುತ್ತಿರುವ ಬ್ಯಾಂಕ್‌ನ ಕೆಲಸವನ್ನು ಬದ್ಧತೆಯಿಂದ ಮಾಡಿ. ಇಲ್ಲವಾದರೆ ಬೀದಿಗೆ ಬೀಳುತ್ತೀರಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಭಾನುವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಏಳೂವರೆ ವರ್ಷಗಳ ಹಿಂದಿನ ಬ್ಯಾಂಕ್‌ನ ಸ್ಥಿತಿ ನೆನಪು ಮಾಡಿಕೊಳ್ಳಿ. ಆರೇಳು ಸಾವಿರ ಸಂಬಳ ಸಿಗದೆ ಅನುಭವಿಸಿರುವ ನೋವು ಮತ್ತೆ ಬರಬಾರದು. ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಸಾಕ್ಷೀಕರಿಸಿ’ ಎಂದು ತಾಕೀತು ಮಾಡಿದರು.

‘ನೋವಿನ ದಿನಗಳ ಸ್ಮರಣೆ ಅಗತ್ಯ. ಈಗ ₹ 40 ಸಾವಿರದಿಂದ -50 ಸಾವಿರದವರೆಗೆ ಸಂಬಳ ಪಡೆಯುತ್ತಿದ್ದೀರಿ. ಅನ್ನ ತಿಂದ ಮನೆಗೆ ದ್ರೋಹ ಮಾಡಬಾರದು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬ್ಯಾಂಕ್‌ನ ಪ್ರತಿ ಶಾಖೆಗೆ ₹ 10 ಕೋಟಿ ಠೇವಣಿ ಸಂಗ್ರಹದ ಗುರಿ ನೀಡಿದ್ದೇವೆ. ವೈಯಕ್ತಿಕವಾಗಿ ತಲಾ ಕನಿಷ್ಠ ₹ 5 ಠೇವಣಿ ಲಕ್ಷ ಸಂಗ್ರಹಿಸಿ. ಜುಲೈ ಅಂತ್ಯದೊಳಗೆ ಈ ಸಾಧನೆ ಮಾಡಿ’ ಎಂದು ಸೂಚಿಸಿದರು.

‘ನಾನು ಕಠಿಣವಾಗಿಯೇ ಮಾತನಾಡುತ್ತೇನೆ. ದಿವಾಳಿಯಾಗಿದ್ದ ಬ್ಯಾಂಕನ್ನು ನಮ್ಮ ಆಡಳಿತ ಮಂಡಳಿ ಕಷ್ಟಪಟ್ಟು ಉಳಿಸಿ ಬೆಳೆಸಿದೆ. ನಾನು ತಪ್ಪು ಮಾಡಿದ್ದರೆ ನೇರವಾಗಿ ಹೇಳಿ. ಅದು ಬಿಟ್ಟು ಕೆಲಸ ಮಾಡಲಾಗದೆ ಬ್ಯಾಂಕ್‌ನ ವಿರುದ್ಧ ಅಪಪ್ರಚಾರ ಮಾಡಬೇಡಿ. ಮಕ್ಕಳಂತೆ ಬ್ಯಾಂಕನ್ನು ಪೋಷಿಸಿ. ಠೇವಣಿ ಗುರಿ ಸಾಧನೆಯಲ್ಲಿ ವಿಫಲರಾದವರಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ’ ಎಂದು ಗುಡುಗಿದರು.

ಮೃತ ರೈತರಿಗೆ ಪರಿಹಾರ: ‘ಅವಿಭಜಿತ ಜಿಲ್ಲೆಯಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದಿರುವ ರೈತರು ಕೋವಿಡ್‌ನಿಂದ ಮೃತಪಟ್ಟಿದ್ದರೆ ವಿವರ ಕೊಡಿ. ಮೃತ ರೈತರ ಸಾವಿನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರಚೀಟಿ, ಸಾಲ ಪಡೆದ ದಾಖಲೆಪತ್ರಗಳನ್ನು ಜುಲೈ 1ರೊಳಗೆ ಬ್ಯಾಂಕ್‌ನ ಕೇಂದ್ರ ಕಚೇರಿಗೆ ಸಲ್ಲಿಸಿ. ಮೃತ ರೈತರಿಗೆ ಅಫೆಕ್ಸ್‌ ಬ್ಯಾಂಕ್‌ ಪರಿಹಾರ ನೀಡಲಿದೆ’ ಎಂದು ವಿವರಿಸಿದರು.

‘ಈಗಾಗಲೇ ಬ್ಯಾಂಕ್‌ನ ಎಲ್ಲಾ ಶಾಖೆಗಳ ಲೆಕ್ಕಪರಿಶೋಧನೆ ನಡೆಯುತ್ತಿದ್ದು, ಲೋಪ ಸರಿಪಡಿಸಿಕೊಳ್ಳಿ. ಗಣಕೀಕೃತ ಲೆಕ್ಕಪರಿಶೋಧನೆ ಪ್ರಕ್ರಿಯೆಯನ್ನು ಜೂನ್‌ 30ರೊಳಗೆ ಪೂರ್ಣಗೊಳಿಸಬೇಕು. ವಿವಿಧೋದ್ದೇಶ ಸೇವಾ ಕೇಂದ್ರಗಳಡಿ ಸೊಸೈಟಿಗಳು ಗೋದಾಮು ನಿರ್ಮಾಣಕ್ಕೆ ಕೂಡಲೇ ಅಂದಾಜು ಪಟ್ಟಿ ಮತ್ತು ನಕ್ಷೆ ನೀಡಬೇಕು. ಜುಲೈ 1ರಿಂದ ಸ್ವಸಹಾಯ ಗುಂಪುಗಳ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಿ’ ಎಂದರು.

ಬ್ಯಾಂಕ್‌ನ ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಶಿವಕುಮಾರ್, ದೊಡ್ಡಮನಿ, ನಾಗೇಶ್, ಖಲೀಮ್‌ ಉಲ್ಲಾ, ಅವಿಭಜಿತ ಕೋಲಾರ ಜಿಲ್ಲೆಯ ಬ್ಯಾಂಕ್‌ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು