ಕೋಲಾರ: ಮೊನ್ನೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಈ ತಬಲ ಕಲಾವಿದನ ಕೈಚಳಕಕ್ಕೆ ಖ್ಯಾತ ಗಾಯಕರು ತಲೆದೂಗುತ್ತಲೇ ಹಾಡುತ್ತಿದ್ದರು. ನೂರಾರು ಪ್ರೇಕ್ಷಕರು, ವಿವಿಧ ಕ್ಷೇತ್ರಗಳ ಗಣ್ಯರು ತದೇಕಚಿತ್ತದಿಂದ ಆ ಸಂಗೀತ ವೈಭವವನ್ನು ಕಿವಿತುಂಬಿಕೊಳ್ಳುತ್ತಿದ್ದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಹತ್ತಾರು ಮಂದಿ ಪ್ರಸಿದ್ಧ ಗಾಯಕರು ಹಾಡಿದರು. ಸ್ವತಃ ಗೊಲ್ಲಹಳ್ಳಿ ಶಿವಪ್ರಸಾದ್ ಹಾಡಿದ ‘ಎಲ್ಲಾ ಮಾಯ ನಾಳೆ ನಾವು ಮಾಯ’, ಹಾಗೆಯೇ, ಡಿ.ಆರ್.ರಾಜಪ್ಪ, ಮುನಿರೆಡ್ಡಿ, ವೆಂಕಟಾಚಲಪತಿ ಅವರ ವೈವಿಧ್ಯಮಯ ಹಾಡುಗಳಿಗೆ ತಬಲ ನುಡಿಸುತ್ತಾ ರಂಚಿಸಿದ್ದು ತಬಲ ಕಲಾವಿದ ಆರ್.ವಿ.ರಮಣ. ದಣಿವರಿಯದೇ ಎಲ್ಲರ ಹಾಡುಗಳಿಗೆ ತಮ್ಮ ಕೈಚಳಕ ತೋರಿಸಿದರು.
ಕೋಲಾರ ನಗರದ ಶಾಂತಿನಗರ ಬಡಾವಣೆಯ ನಿವಾಸಿ, ಜಾನಪದ ಕಲಾವಿರ ರಮಣ ಅವರಿಗೆ ಈಗ 50 ವರ್ಷ. ತಮ್ಮ 15ನೇ ವಯಸ್ಸಿನಲ್ಲೇ ಈ ಕಲಾ ವೃತ್ತಿಗಿಳಿದರು. ‘ತಬಲ ರಮಣ’ ಎಂದೇ ಪ್ರಸಿದ್ಧಿ. ಇದು ಅವರ ವಂಶಪಾರಂಪರ್ಯ ವೃತ್ತಿ ಕೂಡ. ಚರ್ಮವಾದ್ಯಗಳೇ ಇವರ ನಿತ್ಯ ಸಂಗಾತಿ. ಕಲಾವಿದರಾಗಿದ್ದ ತಂದೆ ಹಾಗೂ ಗುರು ದಿವಂಗತ ಪಿ.ರಾಮಚಂದ್ರ ಇದೇ ವೃತ್ತಿಯಲ್ಲಿ ಜಾನಪದ ಜ್ಞಾನ–ವಿಜ್ಞಾನ ರಾಜ್ಯ ಪ್ರಶಸ್ತಿ ಪಡೆದವರು.
ರಮಣ ಬರೀ ತಬಲ ನುಡಿಸುವ ಕಲಾವಿದನಲ್ಲ; ಚರ್ಮವಾದ್ಯ ತಯಾರಕ ಕೂಡ. ಮೃದಂಗ, ತಬಲ, ಡೋಲಕ್, ಚಂಡೆ, ನಗಾರಿ ಸೇರಿದಂತೆ ಹಲವಾರು ಚರ್ಮವಾದ್ಯ ಪರಿಕರಗಳನ್ನು ಇವರೇ ತಯಾರಿಸುತ್ತಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಭೋವಿ ಕಾಲೊನಿ ರಸ್ತೆಯಲ್ಲಿ ಪುಟ್ಟ ಅಂಗಡಿಯನ್ನೂ ಇಟ್ಟುಕೊಂಡಿದ್ದಾರೆ.
‘ಕಲಾವಿದರಾಗಿದ್ದ ತಂದೆ ಕೆಲಸ ನೋಡಿ ನಾನು ಇದೇ ವೃತ್ತಿಗೆ ಬಂದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಜಿಲ್ಲೆ, ರಾಜ್ಯ, ಹೊರರಾಜ್ಯಗಳಲ್ಲಿ, ಮೈಸೂರು ದಸರೆಯಲ್ಲಿ, ಹಂಪಿ ಉತ್ಸವದಲ್ಲಿ, ತಿರುಮಲ ತಿರುಪತಿಯಲ್ಲಿ, ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನೀಡಿದ್ದೇನೆ’ ಎನ್ನುತ್ತಾರೆ ರಮಣ.
ಇವರಿಗೆ ಈಗಾಗಲೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನಶ್ರೀ ಸೇರಿ ಹಲವಾರು ಪುರಸ್ಕಾರಗಳು ಒಲಿದಿವೆ. ವಿವಿಧೆಡೆ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಪ್ರಸಿದ್ಧ ಗಾಯಕರಾದ ಅಪ್ಪಿಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ಡಿ.ಆರ್.ರಾಜಪ್ಪ, ದಿ.ಜನ್ನಘಟ್ಟ ಕೃಷ್ಣಮೂರ್ತಿ, ಬಾಣಂದೂರು ಕೆಂಪಯ್ಯ, ಜನಾರ್ದನ್ (ಜನ್ನಿ), ಚಿಂತಾಮಣಿ ಮುನಿರೆಡ್ಡಿ ಸೇರಿದಂತೆ ಹಲವರ ಗಾಯನಕ್ಕೆ ತಬಲ ನುಡಿಸಿದ್ದಾರೆ.
ಜೊತೆಗೆ ಶಾಲೆಗಳಲ್ಲಿ, ವಿವಿಧ ಕಾರ್ಯಾಗಾರಗಳಲ್ಲಿ ತಬಲ ಶಿಕ್ಷಕರಾಗಿ ಮಕ್ಕಳಿಗೆ ತರಬೇತಿ ಕೂಡ ನೀಡುತ್ತಿದ್ದಾರೆ. ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಆದಿಮದಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದ ನಾಟಕಗಳಲ್ಲೂ ತಬಲ ನುಡಿಸಿದ್ದಾರೆ. ಹಾಡುಗಾರಿಕೆಯಲ್ಲೂ ಎತ್ತಿದ ಕೈ.
ಈ ಹಿಂದೆ ರಾಜ್ಯದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಗೆದ್ದಿದ್ದಾರೆ. ತಬಲ ವಾದನ, ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.
‘ಕಲಾವಿದರು ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಅವರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ, ಹಲವು ಕಲಾವಿದರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಸರ್ಕಾರದ ನೆರವು ಬೇಕಿದೆ. ಬಡ ಕಲಾವಿದರಿಗೆ 50ನೇ ವಯಸ್ಸಿನಿಂದಲೇ ಮಾಸಾಶನ ಕೊಡಬೇಕು’ ಎಂದು ಅವರು ಮನವಿ ಮಾಡುತ್ತಾರೆ.
ತಬಲ ವಾದನದ ಜೊತೆ ಚರ್ಮವಾದ್ಯ ತಯಾರಿಸುತ್ತೇನೆ ರಿಪೇರಿ ಮಾಡಿಕೊಡುತ್ತೇನೆ. ಚರ್ಮವಾದ್ಯ ತಯಾರಿಸಿಕೊಡುವಂತೆ ಕರ್ನಾಟಕವಲ್ಲದೇ ತಮಿಳುನಾಡು ಆಂಧ್ರದಿಂದಲೂ ಬೇಡಿಕೆ ಬರುತ್ತದೆಆರ್.ವಿ.ರಮಣ ತಬಲ ವಾದಕ ತಯಾರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.