ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕೆರೆಗಳ ಸ್ವರೂಪಕ್ಕೆ ದಕ್ಕೆ: ರೈತ ಸಂಘ ಪ್ರತಿಭಟನೆ

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ಗೆ ಮಣ್ಣು ಸಾಗಣೆ
Last Updated 11 ಮಾರ್ಚ್ 2022, 15:05 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿಯ ಆದೇಶ ಉಲ್ಲಂಘಿಸಿ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಕಾಮಗಾರಿಗೆ ಕೆರೆಗಳಲ್ಲಿ ಮನಸೋಇಚ್ಛೆ ಮಣ್ಣು ತೆಗೆಯುತ್ತಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಿದರು.

‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆಲ ಷರತ್ತು ವಿಧಿಸಿ ಎಕ್ಸ್‌ಪ್ರೆಸ್‌ ಕಾರಿಡಾರ್‌ ಕಾಮಗಾರಿಗೆ ಕೆರೆಗಳಲ್ಲಿ ಮಣ್ಣು ತೆಗೆಯಲು ಅನುಮತಿ ಕೊಟ್ಟಿದ್ದಾರೆ. ಆದರೆ, ಗುತ್ತಿಗೆದಾರರು ಈ ಷರತ್ತುಗಳನ್ನು ಉಲ್ಲಂಘಿಸಿ ತುಂಬಾ ಆಳಕ್ಕೆ ಮಣ್ಣು ತೆಗೆದು ಸಾಗಿಸುತ್ತಿದ್ದಾರೆ. ಇದರಿಂದ ಕೆರೆಗಳ ಸ್ವರೂಪವೇ ಬದಲಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಕೃಷಿ ಉದ್ದೇಶಕ್ಕೆ ಕೆರೆಗಳಲ್ಲಿ ಮಣ್ಣು ತೆಗೆಯಲು ಅವಕಾಶ ಕೇಳಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನೂರೊಂದು ಕಾನೂನು ಹೇಳಿ ಅನುಮತಿ ನಿರಾಕರಿಸುತ್ತಾರೆ. ಆದರೆ, ನಿಗದಿತ ಆಳದ ಮಿತಿ ಮೀರಿ ಮಣ್ಣು ತೆಗೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ಜಿಲ್ಲೆಯ ಜಲ ಮೂಲಗಳ ಜೀವನಾಡಿಯಾದ ಕೆರೆಗಳು ಎಕ್ಸ್‌ಪ್ರೆಸ್‌ ಕಾರಿಡಾರ್‌ ಕಾಮಗಾರಿಯಿಂದ ಹಾಳಾಗುತ್ತಿವೆ. ತುಂಬಾ ಆಳಕ್ಕೆ ಮಣ್ಣು ತೆಗೆದಿರುವುದರಿಂದ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಜನ ಹಾಗೂ ಜಾನುವಾರುಗಳ ಪ್ರಾಣಕ್ಕೆ ಎರವಾಗುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳೆಗಳು ಹಾಳು: ‘ಎಕ್ಸ್‌ಪ್ರೆಸ್ ಕಾರಿಡಾರ್‌ ಕಾಮಗಾರಿಗೆ ಮಣ್ಣು ಸಾಗಿಸುತ್ತಿರುವ ಮಾರ್ಗದಲ್ಲಿ ದೂಳಿನ ಸಮಸ್ಯೆ ಸೃಷ್ಟಿಯಾಗಿದೆ. ದೂಳಿನಿಂದ ಅಕ್ಕಪಕ್ಕದ ಕೃಷಿ ಜಮೀನುಗಳಲ್ಲಿ ಬೆಳೆಗಳು ಹಾಳಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ನಿಗದಿತ ಭಾರ ಮಿತಿ ಮೀರಿ ಮಣ್ಣು ಸಾಗಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ದೂಳಿನಿಂದ ಹಾಳಾಗಿರುವ ಬೆಳೆಗೆ ಪರಿಹಾರ ಕೊಡಬೇಕು. ಕೆರೆಗಳಲ್ಲಿ ಮಣ್ಣು ತೆಗೆಯಲು ನೀಡಿರುವ ಅನುಮತಿ ರದ್ದುಪಡಿಸಬೇಕು. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಮಣ್ಣು ತೆಗೆದಿರುವ ಕೆರೆಗಳು ಹಾಳಾಗಿರುವ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ‌ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಕಾರ್ಯಾಧ್ಯಕ್ಷ ಹನುಮಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಣ್ಣ, ಸದಸ್ಯರಾದ ಮುನಿಯಪ್ಪ, ಪ್ರಭಾಕರ್, ವೇಣುಗೋಪಾಲ್, ಸಂದೀಪ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT