ಶನಿವಾರ, ಆಗಸ್ಟ್ 13, 2022
24 °C
ಸದಸ್ಯರ ಸಭೆಯಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ

ಸಹಕಾರ ಕ್ಷೇತ್ರದಿಂದ ರೈತರ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಹಕಾರ ಕ್ಷೇತ್ರದಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ತಮ್ಮ ವಹಿವಾಟು ನಡೆಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ರೈತರು ಸಹಕಾರ ಸಂಘದಲ್ಲಿ ಹೆಸರು ನೋಂದಾಯಿಸಿ ಸೌಕರ್ಯ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕು’ ಎಂದರು.

‘ಡಿಸಿಸಿ ಬ್ಯಾಂಕ್‌ನ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತಿತ್ತು. ಈಗ ಈ ಬ್ಯಾಂಕ್‌ ರಾಜ್ಯದಲ್ಲಿ ಮಾದರಿ ಬ್ಯಾಂಕ್ ಆಗಿ ಬೆಳೆದಿದೆ. ಬ್ಯಾಂಕ್‌ನ ಅಭಿವೃದ್ಧಿಗೆ ಮಹಿಳೆಯರು, ರೈತರು ಸಹಕಾರ ನೀಡಬೇಕು. ಸಕಾಲಕ್ಕೆ ಸಾಲ ಮರು ಪಾವತಿಸಿ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 205 ಸಹಕಾರಿ ಸಂಘಗಳಿವೆ. ಸಂಘಗಳು ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ರೈತರು ಸಂಘಗಳಲ್ಲಿ ದೊಡ್ಡ ಮಟ್ಟದಲ್ಲಿ ಹಣಕಾಸು ವಹಿವಾಟು ನಡೆಸುತ್ತಿರುವುದು ಸಂತಸದ ವಿಚಾರ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸೊಸೈಟಿಗಳನ್ನು ಗಣಕೀಕರಣಗೊಳಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ವ್ಯವಹಾರದಲ್ಲಿ ಯಾವುದೇ ಲೋಪವಾಗದಂತೆ ರೈತರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ತಲುಪಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಸೊಸೈಟಿಗಳಲ್ಲಿ ಪಡಿತರ ಆಹಾರ ಪದಾರ್ಥ ಮತ್ತು ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ರೈತರನ್ನು ಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳ ಮಾಲೀಕರ ಶೋಷಣೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಸಲಕರಣೆಗಳನ್ನು ತಲುಪಿಸಲಾಗುವುದು. ರೈತರು ಖಾಸಗಿ ಅಂಗಡಿಗಳಿಗೆ ಹೋಗುವುದನ್ನು ಬಿಟ್ಟು ಸಹಕಾರ ಸಂಘಕ್ಕೆ ಬರಬೇಕು’ ಎಂದು ಕೋರಿದರು.

ವಿಶ್ವಾಸ ಗಳಿಸಿ: ‘ಇತ್ತೀಚಿನ ವರ್ಷಗಳಲ್ಲಿ ಸಹಕಾರ ಕ್ಷೇತ್ರ ಬಲವಾಗಿದೆ. ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ರೈತರ ವಿಶ್ವಾಸ ಗಳಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಅಭಿಪ್ರಾಯಪಟ್ಟರು.

‘ರೈತರು ಡಿಸಿಸಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟರೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಅಧಿಕ ಶೇ 8ರಷ್ಟು ಬಡ್ಡಿ ಪಾವತಿಸಲಾಗುತ್ತದೆ. ಅದೇ ರೀತಿ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತದೆ ಮಹಿಳೆಯರು ಕಿಸಾನ್ ಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ತಿಳಿಸಿದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಗೋಪಾಲ್, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್, ಕಡಗಟ್ಟೂರು ಸೊಸೈಟಿ ನಿರ್ದೇಶಕರಾದ ಎಂ.ಡೇವಿಡ್, ಎಸ್.ಕೃಷ್ಣಪ್ಪ, ವೆಂಕಟೇಶಪ್ಪ, ಡಿ.ರಾಜಣ್ಣ, ರಾಮಚಂದ್ರ, ವಿಜಯಮ್ಮ, ಬೈರಮ್ಮ, ಚೌಡರೆಡ್ಡಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು