ಗುರುವಾರ , ಏಪ್ರಿಲ್ 9, 2020
19 °C

ಸಾಮಾಜಿ, ಆರ್ಥಿಕ ಅಭಿವೃದ್ಧಿಗೆ ಪೂರಕ: ಡಿ.ವಿ.ಹರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳು ಬಡ ಜನರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.

ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸುಜ್ಞಾನ ಶಿಷ್ಯ ವೇತನ ಹಾಗೂ ವಿವಿಧ ಯೋಜನೆಗಳ ಅನುದಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯೋಜನೆಯಿಂದ ಸಮಾಜ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ’ ಎಂದರು.

‘ಜಾತಿ, ಮತ, ಧರ್ಮಾತೀತವಾಗಿ ಅರ್ಹರಿಗೆ ಸೌಕರ್ಯಗಳನ್ನು ಕಲ್ಪಿಸುತ್ತಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು ಮಾದರಿಯಾಗಿವೆ. ಯೋಜನೆಯಿಂದಲೇ ಸ್ತ್ರೀಶಕ್ತಿ ಸಂಘಗಳ ಮೂಲಕ ಹಾಗೂ ವಿವಿಧ ಯೋಜನೆಗಳ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

‘ಕೋಚಿಮುಲ್ ಕಾರ್ಯಕ್ರಮಗಳಿಗೂ ಸಂಸ್ಥೆ ನೆರವು ನೀಡುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ ಹೊಸ ಕಟ್ಟಡ ನಿರ್ಮಾಣಕ್ಕೂ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಬರ ಪೀಡಿತ ಜಿಲ್ಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿರುವುದು ಶೈಕ್ಷಣಿಕ ಪ್ರಗತಿಗೆ ಪೂರಕ’ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ‘ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಸಂಸ್ಥೆಯು ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಕರ್ಯಗಳನ್ನು ಕಲ್ಪಿಸುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಾದ್ಯಂತ ಸುಜ್ಞಾನ ಶಿಷ್ಯ ವೇತನಕ್ಕಾಗಿ ೨೨೪ ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿದ್ದು, ಕೋಲಾರ ತಾಲ್ಲೂಕಿನ ೩೩ ಮಂದಿಗೆ ವೇತನ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಆಯ್ಕೆಯಾದವರಿಗೆ ಅವರವರ ವಿದ್ಯಾಭ್ಯಾಸದ ಖರ್ಚುಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ’ ಎಂದು ಹೇಳಿದರು.

ಭಾರತ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್‌ ಮಾತನಾಡಿ, ‘ಚಿನ್ನ, ಹಾಲು, ರೇಷ್ಮೆಯ ನಾಡಾಗಿದ್ದ ಜಿಲ್ಲೆ ಭವಿಷ್ಯದಲ್ಲಿ ಶೈಕ್ಷಣಿಕ, ಕೌಶಲ ಜಿಲ್ಲೆಯಾಗಿ ಮಾರ್ಪಡಬೇಕಾಗಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೂರದೃಷ್ಠಿ ಗುರಿ ಇಟ್ಟುಕೊಂಡು ಅವುಗಳನ್ನು ತಲುಪಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಅರಾಭಿಕೊತ್ತನೂರು ಮುಖಂಡ ನಂಜುಂಡಪ್ಪ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಒಕ್ಕೂಟದ ಜನಜಾಗೃತಿ ವೇದಿಕೆಯ ಗೂಳೇಗೌಡ, ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅರುಣಮ್ಮ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)