ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಂಗವಿಕಲ ರೈತನ ಬೆಳೆ ತೆರವು: ಧರಣಿ

ಅಧಿಕಾರಿಗಳ ವಿರುದ್ಧ ರೈತ ಸಂಘ–ಹಸಿರು ಸೇನೆ ಸದಸ್ಯರ ಆಕ್ರೋಶ
Last Updated 1 ಅಕ್ಟೋಬರ್ 2020, 16:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಡಳಿತ ಭವನ ಹಿಂಭಾಗದಲ್ಲಿನ ಜಮೀನು ಒತ್ತುವರಿ ಸಂಬಂಧ ಅಂಗವಿಕಲ ರೈತನ ಬೆಳೆ ತೆರವು ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

‘ಅಧಿಕಾರಿಗಳು ಅಂಗವಿಕಲ ರೈತ ಶ್ರೀನಿವಾಸ್‌ರ ಜಮೀನಿನಲ್ಲಿದ್ದ ರಾಗಿ ಬೆಳೆ ಏಕಾಏಕಿ ತೆರವುಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸರ್ಕಾರಿ ಜಮೀನಿನ ಒತ್ತುವರಿ ತೆರವು ಸೋಗಿನಲ್ಲಿ ಅಧಿಕಾರಿಗಳು ಅಂಗವಿಕಲ ರೈತನ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಅಮಾಯಕರು ಹಾಗೂ ಬಡ ರೈತರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿರುವ ಜಮೀನನ್ನು ಅಧಿಕಾರಿಗಳು ತೆರವು ಮಾಡುತ್ತಾರೆ. ಆದರೆ, ಬಲಾಢ್ಯರು, ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳು ಮಾಡಿರುವ ಜಮೀನು ಒತ್ತುವರಿ ತೆರವಿಗೆ ಮೀನಮೇಷ ಎಣಿಸುತ್ತಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಹಣವಂತರು ಹಾಗೂ ಪ್ರಭಾವಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಸಂಬಂಧ ಸಲ್ಲಿಕೆಯಾಗಿರುವ ದೂರಿನ ಪ್ರತಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂಳು ಹಿಡಿಯುತ್ತಿವೆ. ಸೌಜನ್ಯಕ್ಕೂ ಆ ದೂರುಗಳನ್ನು ಪರಿಶೀಲಿಸಿದ ಅಧಿಕಾರಿಗಳು ಶ್ರೀನಿವಾಸ್‌ರ ಪ್ರಕರಣದಲ್ಲಿ ಬೆಳೆ ಕೊಯ್ಲಿಗೆ ಕಾಲಾವಕಾಶ ಸಹ ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ’ ಎಂದು ಕಿಡಿಕಾರಿದರು.

ಕುಟುಂಬ ಬೀದಿಗೆ: ‘ಸುಮಾರು 4 ದಶಕದಿಂದ ಜಮೀನಿನ ಅನುಭೋಗದಲ್ಲಿದ್ದೆವು. ಅಧಿಕಾರಿಗಳ ಕೈ ಕಾಲು ಹಿಡಿದು ಅಂಗಲಾಚಿದರೂ ಮನವಿಗೆ ಸ್ಪಂದಿಸದೆ ಏಕಾಏಕಿ ಬೆಳೆ ತೆರವುಗೊಳಿಸಿದರು. ಅಧಿಕಾರಿಗಳ ಕ್ರಮದಿಂದಾಗಿ ನಮ್ಮ ಕುಟುಂಬ ಬೀದಿಗೆ ಬಂದಿದೆ. ಬಡ್ಡಿ ಸಾಲ ಮಾಡಿ ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿದೆ’ ಎಂದು ರೈತ ಶ್ರೀನಿವಾಸ್‌ ಕಣ್ಣೀರು ಹಾಕಿದರು.

‘ಅಧಿಕಾರಿಗಳು ಶೀಘ್ರವೇ ಸರ್ವೆ ನಡೆಸಿ ನಮ್ಮ ಜಮೀನು ಗುರುತಿಸಿ ಕೊಡಬೇಕು. ಇಲ್ಲದಿದ್ದರೆ ಕುಟುಂಬ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಶೀಘ್ರವೇ ಶ್ರೀನಿವಾಸ್‌ರ ಜಮೀನು ಗುರುತಿಸಿ ಕೊಡಬೇಕು. ಬೆಳೆ ನಾಶ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಜಿಲ್ಲೆಯಾದ್ಯಂತ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮಾಡಬೇಕು. ಒತ್ತುವರಿಗೆ ಸಹಕರಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ಮಂಜುನಾಥ್, ಅನಿಲ್, ನಾಗೇಶ್, ತಿಮ್ಮಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT