ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ಐವಿ ಸೋಂಕಿತರಿಗೆ ತಾರತಮ್ಯ–ಬೇಸರ

ಸರ್ಕಾರದಿಂದಲೂ ನಿರ್ಲಕ್ಷ್ಯ: ಸಂಗಮ ಸಂಸ್ಥೆ ನಿಶಾ ಗೋಳೂರು ಆರೋಪ
Last Updated 21 ಜನವರಿ 2023, 5:40 IST
ಅಕ್ಷರ ಗಾತ್ರ

ಕೋಲಾರ: ‘ಎಚ್‌ಐವಿ ಸೋಂಕಿತರತ್ತ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಅಲ್ಲದೇ, ಸಮಾಜವೂ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕಳಂಕಿತರಂತೆ ನೋಡುತ್ತಿದೆ’ ಎಂದು ಸಂಗಮ ಸಂಸ್ಥೆ ಯೋಜನಾ ನಿರ್ದೇಶಕಿ ನಿಶಾ ಗೋಳೂರು ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಎಚ್‌ಐವಿ– ಏಡ್ಸ್ ಸೋಂಕಿತರ ಸಂಬಂಧ ಆಯೋಜಿಸಿದ್ದ ಮಾಧ್ಯಮ ಸಂವೇದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಏಳು ಸಾವಿರ ಮಂದಿ ಎಚ್ಐವಿ ಸೋಂಕಿತರು ಇದ್ದಾರೆ. ಅವರು ಸಾಮಾಜಿಕವಾಗಿ ಎದುರಿಸುತ್ತಿರುವ ಕಳಂಕ ಹಾಗೂ ತಾರತಮ್ಯ ತಡೆಗೆ 2019 ರಲ್ಲಿ ಜಾರಿಗೆ ತಂದಿರುವ ಏಡ್ಸ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕಾಯ್ದೆ ಕುರಿತು ಸಮಾಜದ ಎಲ್ಲಾ ವರ್ಗಗಳಲ್ಲಿ ಅರಿವು ಮೂಡಿಸಬೇಕು’ ಎಂದು ಆಗ್ರಹಿಸಿದರು.

‘ಏಡ್ಸ್‌ ಬಂದಿದೆ ಎಂದು ದೂರವಿಡುತ್ತಾರೆ. ಹಲವರಿಗೆ ಎಚ್‌ಐವಿಗೂ ಏಡ್ಸ್‌ಗೂ ಅರ್ಥವೇ ಗೊತ್ತಿಲ್ಲ, ತಪ್ಪು ಕಲ್ಪನೆಗಳಿವೆ. ಕೆಲಸದ ಸ್ಥಳ, ಕುಟುಂಬ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಲಾಗುತ್ತಿದೆ. ಮೊದಲೇ ಸೋಂಕಿನಿಂದ ನೋವು ಅನುಭವಿಸುತ್ತಿರುವವರಿಗೆ ನಿಂದನೆಯ ಮಾತುಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತರೇ ನಿಧಾನವಾಗಿ ಸಮಾಜದಿಂದ ದೂರು ಉಳಿಯುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೊರೊನಾ ಸಮಾಜದ ಎಲ್ಲಾ ವರ್ಗದ ಜನರನ್ನು ಬಾಧಿಸಿತು, ಆದರೆ, ಸರ್ಕಾರ ಎಚ್‌ಐವಿ ಸೋಂಕಿತರ ಬಗ್ಗೆ ವಿಶೇಷ ಕಾಳಜಿ ವಹಿಸಿಲ್ಲ. ಸೋಂಕಿತರಿಗೆ ಸಾಮಾನ್ಯರಿಗಿಂತ ಮೂರು ಪಟ್ಟು ಹೆಚ್ಚಿನ ಪೌಷ್ಠಿಕಾಂಶದ ಆಹಾರ ಅಗತ್ಯವಿದೆ. ಹೀಗಾಗಿ, ಪೌಷ್ಠಿಕಾಂಶವನ್ನು ಸರ್ಕಾರವೇ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಎಆರ್‌ಟಿ ಕೇಂದ್ರಗಳ ಮೂಲಕ ಸೋಂಕಿತರಿಗೆ ಉಚಿತವಾಗಿ ಮಾತ್ರೆ ಕೊಡುತ್ತಿದ್ದಾರೆ. ಆದರೆ, ಅದು ಸಾಲದು; ಮಾತ್ರೆ ತೆಗೆದುಕೊಂಡಾಗ ಪೋಷಕಾಂಶ ಆಹಾರ ತೆಗೆದುಕೊಳ್ಳಬೇಕು. ಬಡವರು ಇದ್ದು ಅವರಿಗೆ ಪೋಷಕಾಂಶ ಆಹಾರ ಎಲ್ಲಿ ಸಿಗುತ್ತದೆ’ ಎಂದು ಪ್ರಶ್ನಿಸಿದರು.

ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕಿ ಹೇಮಲತಾ ಮಾತನಾಡಿ, ‘ಏಡ್ಸ್ ಕಾಯ್ದೆಯಡಿ ದೂರು ನೀಡಿದರೆ ವಿಚಾರಣೆ ನಡೆಸಿ ನ್ಯಾಯ ಒದಗಿಸುತ್ತಾರೆ. ಓಂಬುಡ್ಸಮನ್ ನ್ಯಾಯಾಧೀಶರು ಇತ್ಯರ್ಥಪಡಿಸಿ ₹ 2 ದಂಡ ಮತ್ತು ಎರಡು ವರ್ಷಗಳ ಸಜೆ ವಿಧಿಸಬಹುದಾಗಿದೆ’ ಎಂದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸೋಂಕಿತ ಮಕ್ಕಳಿಗೆ ಪ್ರತಿ ತಿಂಗಳು ₹ 1 ಸಾವಿರವನ್ನು 308 ಮಕ್ಕಳಿಗೆ ನೀಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳ ಸಹಾಯದಿಂದ ಪೋಷಕಾಂಶ ಆಹಾರ ನೀಡಲಾಗುತ್ತಿದೆ. ಹೆಚ್ಚು ಎಚ್‌ಐವಿ ಪರೀಕ್ಷೆ ನಡೆಸಲಾಗುತ್ತಿದೆ; ಎಂದು ಹೇಳಿದರು.

ಸಮ್ಮಿಲನ ಸಂಸ್ಥೆಯ ಕಾರ್ಯದರ್ಶಿ ಸುರೇಶ್‌ ಮಾತನಾಡಿ, ‘ಸೋಂಕಿತ 55 ಮಂದಿ ತೃತೀಯ ಲಿಂಗಿಗಳಿಗೆ ಸಂಗಮ ಸಂಸ್ಥೆ ಪೋಷಕಾಂಶ ಆಹಾರ ನೀಡುತ್ತಿದೆ. ಉಳಿತಾಯ ಖಾತೆ ಕೂಡ ತೆರೆಯಲಾಗಿದೆ. ಇದರ ಜೊತೆಗೆ ಸರ್ಕಾರ ಹಾಗೂ ಸಮ್ಮಿಲನ ಸಂಸ್ಥೆ ಮತ್ತಷ್ಟು ಸಹಕಾರ ನೀಡಬೇಕು’ ಎಂದು ಕೋರಿದರು.

ಜೀವನ್‌ ಆಶಾ ನೆಟ್ವರ್ಕ್‌ನ ಪ್ರಮೀಳಾ, ಸಮ್ಮಿಲನ ಸಂಸ್ಥೆ ವ್ಯವಸ್ಥಾಪಕ ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT