ಭಾನುವಾರ, ಸೆಪ್ಟೆಂಬರ್ 19, 2021
29 °C
ಅಭಿಪ್ರಾಯ ಪಡೆಯದೆ ಟಿಕೆಟ್‌ ಹಂಚಿಕೆ: ಸ್ಥಳೀಯ ಕಾರ್ಯಕರ್ತರ ಆಕ್ರೋಶ

ಬಿಜೆಪಿ ಅಭ್ಯರ್ಥಿ ವಿರುದ್ಧ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲೋಕಸಭಾ ಚುನಾವಣೆ ಸಂಬಂಧ ಇಲ್ಲಿ ಗುರುವಾರ ನಡೆದ ಬಿಜೆಪಿಯ ಸಮಾಲೋಚನಾ ಸಭೆಯಲ್ಲಿ ಕೆಲ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಮುನಿಸ್ವಾಮಿ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಕ್ಕೆ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರಿಗೆ ಇಷ್ಟವಿರಲಿಲ್ಲ. ಆದರೆ, ವರಿಷ್ಠರು ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯ ಪಡೆಯದೆ ಮುನಿಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದು ನೋವು ತಂದಿದೆ. ಚುನಾವಣೆ ಸಂದರ್ಭದಲ್ಲೂ ವರಿಷ್ಠರು ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆ ವೇಳೆ ಜವಾಬ್ದಾರಿ ನಿಭಾಯಿಸಿದವರನ್ನು ವಿಚಾರಿಸುವವರೇ ಇಲ್ಲ, ಬೂತ್ ಏಜೆಂಟ್‌ಗಳನ್ನು ಕೂಡ ನೇಮಿಸಲಿಲ್ಲ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯೆಂದು ಪದಾಧಿಕಾರಗಳನ್ನೇ ನೇಮಿಸಬೇಡಿ. ಚುನಾವಣೆಗೆ ಅಭ್ಯರ್ಥಿ ನೀಡಿ, ಅವರ ಪರ ಕೆಲಸ ಮಾಡುತ್ತೇವೆ’ ಎಂದು ಅಸಮಾಧಾನ ಹೊರ ಹಾಕಿದರು.

ಆಗ ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೃಷ್ಣಾರೆಡ್ಡಿ, ‘ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ನೋವಾಗಿರುವ ಸಂಗತಿ ಗಮನಕ್ಕೆ ಬಂದಿದೆ. ಚುನಾವಣೆ ಹೇಗೆ ನಡೆಸಬೇಕೋ ಆ ರೀತಿ ನಡೆಸಲು ಸಾಧ್ಯವಾಗಿಲ್ಲ. ಇದಕ್ಕೆ ಭಿನ್ನಾಭಿಪ್ರಾಯ ಕಾರಣ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಲಿಖಿತ ಹೊಂದಾಣಿಕೆಯಲ್ಲಿ ಚುನಾವಣೆ ನಡೆದಿದೆ. ಚುನಾವಣೆ ಗೆಲ್ಲುವುದು ಬೇರೆ ವಿಷಯ. ಚುನಾವಣೆಗೆ 15 ದಿನ ಮುನ್ನ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದೇನೆ. ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಸಿಕ್ಕರೂ ಉಳಿದ ಕ್ಷೇತ್ರಗಳಲ್ಲಿ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ’ ಎಂದರು.

‘ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮುನಿಸ್ವಾಮಿ ಅವರಿಗೆ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡುತ್ತೇವೆ’ ಎಂದು ತಿಳಿಸಿದರು.

ತ್ಯಾಗ ಮಾಡಿದ್ದೀರಿ: ‘40 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾರ್ಯಕರ್ತರ ನೋವು ಅರ್ಥವಾಗುತ್ತದೆ. ಮಾಲೂರಿನಲ್ಲಿ ನನಗಾಗಿರುವ ನೋವನ್ನು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಸ್ವಾಭಿಮಾನ ಬದಿಗಿಟ್ಟು ಬಿಜೆಪಿ ಗೆಲ್ಲಿಸಲು ತ್ಯಾಗ ಮಾಡಿದ್ದೀರಿ. ಇಂತಹ ಪರಿಸ್ಥಿತಿ ಮುಂದೆ ಬರಬಾರದು’ ಎಂದು ಎಚ್ಚರಿಸಿದರು.

ವಿಪಕ್ಷದವರ ಬೆಂಬಲ: ‘ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ರಾಜಕೀಯವಾಗಿ ವಿಶ್ರಾಂತಿ ನೀಡಲು ವಿಪಕ್ಷಗಳ ಕೆಲ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದ್ದಾರೆ’ ಎಂದು ಅಭ್ಯರ್ಥಿ ಎಸ್.ಮುನಿಸ್ವಾಮಿ ಹೇಳಿದರು.

‘ಜನ ಮುನಿಯಪ್ಪರ ದುರಾಡಳಿತ, ಭ್ರಷ್ಟಾಚಾರ, ದೌರ್ಜನ್ಯದಿಂದ ಬೇಸತ್ತು ಈ ಬಾರಿ ಬಿಜೆಪಿಗೆ ಮತ ಹಾಕಿದ್ದಾರೆ. ಅದೇ ರೀತಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಸಹ ನನ್ನ ಗೆಲುವಿಗೆ ಶ್ರಮಿಸಿದ್ದಾರೆ’ ಎಂದರು.

ಗುಂಪುಗಾರಿಕೆ ಮಾಡಬಾರದಿತ್ತು: ‘ಕಾರ್ಯಕರ್ತರು ಮುನಿಯಪ್ಪರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಸೋಲಿಸುವ ತೀರ್ಮಾನ ಕೈಗೊಂಡು ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಮೂಲಕ ಚುನಾವಣೆ ನಡೆಯಬೇಕಿತ್ತು. ಚುನಾವಣೆ ಜವಾಬ್ದಾರಿ ತೆಗೆದುಕೊಂಡವರು ಗುಂಪುಗಾರಿಕೆ ಮಾಡಬಾರದಿತ್ತು’ ಎಂದು ಮಾಜಿ ಶಾಸಕ ವೈ.ಸಂಪಂಗಿ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈಗ ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಬಿಜೆಪಿಯ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಭ್ರಮೆ ಬೇಡ. ಅವರವರ ಪಕ್ಷದ ಪರ ಅವರು ಕೆಲಸ ಮಾಡುತ್ತಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎ.ನಾಗರಾಜು, ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷ ವೈ.ಸುರೇಂದ್ರಗೌಡ, ಪ್ರಧಾನ ಕಾರ್ಯದರ್ಶಿ ವಾಸುದೇವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.