ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆ: ಮಗಳ ಕೊಂದು ಸುಟ್ಟು ಹಾಕಿದ್ದ ತಂದೆ

ಮರ್ಯಾದೆಗೇಡು ಹತ್ಯೆ: 7 ತಿಂಗಳ ನಂತರ ಕೃತ್ಯ ಬಯಲು
Published 27 ಡಿಸೆಂಬರ್ 2023, 0:26 IST
Last Updated 27 ಡಿಸೆಂಬರ್ 2023, 0:26 IST
ಅಕ್ಷರ ಗಾತ್ರ

ನಂಗಲಿ (ಕೋಲಾರ ಜಿಲ್ಲೆ): ಮುಳಬಾಗಿಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಏಳು ತಿಂಗಳ ಹಿಂದೆ ನಡೆದಿದ್ದ ‘ಮರ್ಯಾದೆಗೇಡು ಹತ್ಯೆ’ ಈಗ ಬಹಿರಂಗವಾಗಿದೆ. ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ್ದ ಮಗಳನ್ನು ಮರ್ಯಾದೆಗೆ ಅಂಜಿ ತೋಟದಲ್ಲಿ ಕೊಂದು, ಸುಟ್ಟು ಹಾಕಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಥಮ ಪಿಯುಸಿ ಓದುತ್ತಿದ್ದ ಮರವೇಮನೆ ಗ್ರಾಮದ ಅರ್ಚಿತಾ (17) ಕೊಲೆಯಾದ ಯುವತಿ. ಮೇ 21ರಂದು ಗಂಡನ ಮನೆಯಿಂದ ಕರೆ ತರುವಾಗ ಆಕೆಯ ತಂದೆ ರವಿ, ತೋಟದ ಮನೆಗೆ ಕರೆದೊಯ್ದು ಬಡಿಗೆಯಿಂದ ಹೊಡೆದು ಕೊಂದಿದ್ದು, ಅಲ್ಲಿಯೇ ಸುಟ್ಟುಹಾಕಿದ್ದ.  

ತಿಗಳ ಸಮುದಾಯದ ಅರ್ಚಿತಾ ತನ್ನ ಸಹೋದರ ಸಂಬಂಧಿ ಯುವಕನನ್ನೇ (ಚಿಕ್ಕಪ್ಪನ ಮಗ) ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾಗುತ್ತಲೇ ಪೋಷಕರು ಕೋಲಾರ ತಾಲ್ಲೂಕಿನ ವೇಮಗಲ್‌ ಬಳಿಯ ಜೋಡಿ ಕೃಷ್ಣಪುರ ಗ್ರಾಮದ ತಮ್ಮದೇ ಸಮುದಾಯದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು.

‘ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ ಮಗಳನ್ನು ತಂದೆಯೇ ಹೋಗಿ ಮೇ 21ರಂದು ವಾಪಸ್‌ ಕರೆ ತಂದಿದ್ದ. ಗ್ರಾಮಕ್ಕೆ ಬರುವಾಗ ತೋಟದ ಮನೆಗೆ ಕರೆದೊಯ್ದು ಮಗಳನ್ನು ಕೊಂದು ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಗರ್ಜಿಯಿಂದ ಬಯಲು: ಅರ್ಚಿತಾ ಕಾಣಿಸುತ್ತಿಲ್ಲ ಎಂದು ನಂಗಲಿ ಪೊಲೀಸ್ ಠಾಣೆಗೆ ಮೂಗರ್ಜಿಯೊಂದು ಬಂದಿತ್ತು. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆಯೇ, ‘ಮಗಳು ಕಾಣೆಯಾಗಿದ್ದಾಳೆ’ ಎಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

‘ಯುವತಿಯ ತಂದೆಯನ್ನು ನಾಲ್ಕು ದಿನದ ಹಿಂದೆ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ವಿಷಯ ಬಹಿರಂಗವಾಗಿದೆ. ಮರ್ಯಾದೆಗೆ ಅಂಜಿ ಮಗಳನ್ನು ತಾನೇ ಕೊಂದಿದ್ದಾಗಿ ಯುವತಿಯ ತಂದೆ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಚಿತಾಳನ್ನು ಕೊಂದು ಸುಟ್ಟು ಹಾಕಿದ ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡದೊಂದಿಗೆ ತೆರಳಿದ ಪೊಲೀಸರಿಗೆ ಸುಟ್ಟ ಮೂಳೆಗಳು ಲಭಿಸಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ರವಿ
ರವಿ
ಅರ್ಚಿತಾಳನ್ನು ಸುಟ್ಟು ಹಾಕಿದ ಸ್ಥಳದಲ್ಲಿ ಲಭಿಸಿದ ಮೂಳೆಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಎಫ್‌ಎಸ್‌ಎಲ್‌ ತಂಡ
ಅರ್ಚಿತಾಳನ್ನು ಸುಟ್ಟು ಹಾಕಿದ ಸ್ಥಳದಲ್ಲಿ ಲಭಿಸಿದ ಮೂಳೆಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಎಫ್‌ಎಸ್‌ಎಲ್‌ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT