ಬುಧವಾರ, ಡಿಸೆಂಬರ್ 1, 2021
20 °C

ಸೇವೆಯಿಂದ ವಜಾ: ಶುಶ್ರೂಷಕಿಯರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಆತಂಕದ ನಡುವೆ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ಸರ್ಕಾರದ ಘನತೆ ಕಾಪಾಡಿದ್ದೇವೆ. ಇದನ್ನು ಲೆಕ್ಕಿಸದೆ ನಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂದು ಶುಶ್ರೂಷಕಿ ಶಶಿಕಲಾ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆರೋಗ್ಯ ಇಲಾಖೆಯಲ್ಲಿ 6 ತಿಂಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಏಕಾಏಕಿ 7 ಮಂದಿ ಶುಶ್ರೂಷಕಿಯರನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಅಳಲು ತೋಡಿಕೊಂಡರು.

‘ಪಾರದರ್ಶಕವಾಗಿ ನಡೆದ ಸಂದರ್ಶನದಲ್ಲಿ ನಾವು ಸೇವೆಗೆ ಆಯ್ಕೆಯಾಗಿದ್ದವು. ಇಲಾಖೆ ಅಧಿಕಾರಿಗಳು ಯಾವುದೇ ನೋಟಿಸ್‌ ನೀಡದೆ ನಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದು ಸರಿಯಲ್ಲ. ನಮಗೂ ಕುಟುಂಬವಿದೆ. ಅಧಿಕಾರಿಗಳು ಮಾನವೀಯವಾಗಿ ವರ್ತಿಸಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ನನ್ನ ಸೇವೆ ಗುರುತಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಕೋವಿಡ್ ಸಂಬಂಧ ನಡೆದ ಜಿಲ್ಲಾವಾರು ವಿಡಿಯೋ ಸಂವಾದದಲ್ಲಿ ಅವಕಾಶ ಕಲ್ಪಿಸಿದ್ದರು. ಸಂವಾದದಲ್ಲಿ ಯಡಿಯೂರಪ್ಪ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ, ಕೋವಿಡ್ ಕರ್ತವ್ಯ ನಿರ್ವಹಣೆ ಬಗ್ಗೆ ವಿವರಿಸಿದೆ. ಅದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದರು.

‘ಕರ್ತವ್ಯ ನಿರ್ವಹಣೆ ವೇಳೆ ನನಗೂ ಕೊರೊನಾ ಸೋಂಕು ತಗುಲು ಕುಟುಂಬ ಸದಸ್ಯರಿಗೆಲ್ಲಾ ಹರಡಿತು. ಅಂತಹ ಸಂಕಷ್ಟದ ಸಮಯದಲ್ಲೂ ಧೃತಿಗೆಡದೆ ಕೆಲಸ ಮಾಡಿದೆ. ಆದರೆ, ಅಧಿಕಾರಿಗಳು ಅದನ್ನೆಲ್ಲಾ ಪರಿಗಣನೆಗೆ ತೆಗೆದುಕೊಳ್ಳದೆ ಅಮಾನವೀಯವಾಗಿ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ’ ಎಂದು ಆರೋಪಿಸಿದರು.

ವಿಷ ಕೊಡಲಿ: ‘ಕೋವಿಡ್ ಕರ್ತವ್ಯದಲ್ಲಿ ತಿಂಗಳಿಗೆ ₹ 25 ಸಾವಿರ ವೇತನ ಪಡೆಯುತ್ತಿದ್ದೆ. ಎನ್ಎಚ್ಎಂ ಹುದ್ದೆಯಾದ ಕಾರಣ ಹೆಚ್ಚಿನ ಸಂಬಳ ಬಿಟ್ಟು ₹ 11,200 ಸಂಬಳಕ್ಕೆ ಬಂದಿದ್ದೇವೆ. ಕೆಲವರು ಡಿ ಗ್ರೂಪ್ ಸಿಬ್ಬಂದಿಯಾಗಿ ಉದ್ಯೋಗ ಪಡೆದು ಕೋವಿಡ್ ಸಂದರ್ಭದಲ್ಲಿ ಜನರಿಗೆ ಸೇವೆ ಒದಗಿಸಿದ್ದೇವೆ. ವಿನಾಕಾರಣ ನಮ್ಮನ್ನು ಕೆಲಸದಿಂದ ವಜಾ ಮಾಡಿರುವುದು ಸರಿಯಲ್ಲ. ಪುನಃ ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ವಿಷ ಕೊಟ್ಟು ಸಾಯಿಸಲಿ’ ಎಂದು ಶುಶ್ರೂಷಕಿ ರೇಖಾ ಕಣ್ಣೀರಿಟ್ಟರು.

ಶುಶ್ರೂಷಕಿಯರಾದ ಚೈತ್ರಾ, ಸುಮಾ, ಸುಪ್ರಿಯಾ, ಚಂದ್ರಕಲಾ, ಶಾರದಾಬಾಯಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು