ಗುರುವಾರ , ಅಕ್ಟೋಬರ್ 22, 2020
23 °C

ಜಿಲ್ಲಾ ಆಸ್ಪತ್ರೆ: ಸ್ವಚ್ಛತೆಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಇರಬಾರದು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿನ ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಅಸ್ಪತ್ರೆಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಸ್ವಚ್ಛತೆ ಇರಬೇಕು. ಸ್ವಚ್ಛತೆಯಿಂದಲೇ ಜನರ ಕಾಯಿಲೆಗಳು ಅರ್ಧ ವಾಸಿಯಾಗುತ್ತವೆ. ಕಸ ಕಡ್ಡಿ, ಕಾಫಿ ಲೋಟಗಳನ್ನು ಮನಬಂದಂತೆ ಆಸ್ಪತ್ರೆ ಆವರಣದಲ್ಲಿ ಎಸೆಯಬಾರದು. ತಂಬಾಕು ಪದಾರ್ಥಗಳು ಅಥವಾ ಎಲೆ ಅಡಿಕೆ ಜಿಗಿದು ಉಗಿದಿರುವ ಗುರುತು ಕಾಣಬಾರದು’ ಎಂದು ತಾಕೀತು ಮಾಡಿದರು.

‘ಆಸ್ಪತ್ರೆ ಆವರಣದಲ್ಲಿ ಕೆಲವೆಡೆ ದೀಪಗಳಿಲ್ಲದೆ ತೊಂದರೆ ಆಗಿದೆ ಎಂದು ಸಾರ್ವಜನಿಕರಿಂದ ದೂರು ಬಂದಿವೆ. ಕೆಟ್ಟುರುವ ವಿದ್ಯುತ್‌ ದೀಪಗಳನ್ನು ಸರಿಪಡಿಸಬೇಕು. ಅಗತ್ಯವಿದ್ದರೆ ಹೊಸ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು. ಸಿ.ಸಿ ಕ್ಯಾಮೆರಾಗಳು ಸುಸಜ್ಜಿತವಾಗಿರಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಇರಬಾರದು. ಶುದ್ಧ ನೀರಿನ ಘಟಕದಿಂದ ಆಸ್ಪತ್ರೆಗೆ ನಿರಂತರವಾಗಿ ನೀರು ಸರಬರಾಜು ಆಗಬೇಕು. ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಸಂಗ್ರಹವಾಗಿರುವ ನಿರುಪಯುಕ್ತ ಹಳೇ ವಸ್ತುಗಳನ್ನು ವಿಲೇವಾರಿ ಮಾಡಿ’ ಎಂದು ಆದೇಶಿಸಿದರು.

ನಿರ್ಣಾಯಕ ಪಾತ್ರ: ‘ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ನಗರಸಭೆ ಜತೆ ಕೈಜೋಡಿಸಬೇಕು. ಸ್ವಚ್ಛತೆ ಕಾಪಾಡುವುದು ಪೌರ ಕಾರ್ಮಿಕರ ಜವಾಬ್ದಾರಿ ಎಂಬ ಧೋರಣೆ ಬದಲಾಗಬೇಕು. ಕೊರೊನಾ ಸೋಂಕಿತರನ್ನು ಗುಣಮುಖರಾಗಿಸಲು ಎಸ್‌ಎನ್‌ಆರ್‌ ಆಸ್ಪತ್ರೆ ನಿರ್ಣಾಯಕ ಪಾತ್ರ ವಹಿಸಿದೆ. ಈ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರು ಉತ್ತಮ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರದಿಂದ ಬೇಗನೆ ಗುಣಮುಖರಾಗುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.