ಮಂಗಳವಾರ, ಜೂನ್ 28, 2022
25 °C
ಮುನಿರತ್ನ ಜವಾಬ್ದಾರಿ ಮರೆತಿದ್ದಾರೆ

ಉಸ್ತುವಾರಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ: ವಿ. ಪರಿಷತ್‌ ಸದಸ್ಯ ಗೋವಿಂದರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಚಿವ ಮುನಿರತ್ನ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ 8 ತಿಂಗಳು ಕಳೆದರೂ ಈವರೆಗೆ ಒಂದು ಬಾರಿಯೂ ಕೆಡಿಪಿ ಸಭೆ ನಡೆಸಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದು, ಅಂತಹ ನಿಷ್ಟ್ರಯೋಜಕ ಸಚಿವರು ಯಾಕೆ ಬೇಕು?’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿರತ್ನ ಅವರು ಉಸ್ತುವಾರಿ ಸಚಿವರಾದ ಬಳಿಕ ಆ.15ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜ.26ರ ಗಣ ರಾಜ್ಯೋತ್ಸವದ ದಿನ ಜಿಲ್ಲೆಗೆ ಬಂದು ಧ್ವಜಾರೋಹಣ ಮಾಡಿ ಹೋದವರು ಮತ್ತೆ ಇತ್ತ ತಿರುಗಿ ನೋಡಿಲ್ಲ. ಉಸ್ತುವಾರಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ’ ಎಂದು ಲೇವಡಿ ಮಾಡಿದರು.

‘ಯರಗೋಳ್‍ ಯೋಜನೆಯ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ ಎಂದು ಮುನಿರತ್ನ ಹೇಳಿದ್ದರು. 4 ತಿಂಗಳಾದರೂ ಯೋಜನೆ ಸ್ಥಳದಲ್ಲಿ ಸಣ್ಣ ಕೆಲಸವೂ ಆಗುತ್ತಿಲ್ಲ. ಯರಗೋಳ್‌ ಡ್ಯಾಂನಲ್ಲಿ 74 ಅಡಿ ನೀರು ಇದ್ದರೂ ಜಿಲ್ಲೆಗೆ ಉಪಯೋಗ ಆಗುತ್ತಿಲ್ಲ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಚರ್ಚಿಸಿ ಮುಖ್ಯಮಂತ್ರಿಗಳ ಬಳಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು‌’ ಎಂದರು.

‘ಜಿಲ್ಲೆಯ ಎಚ್.ನಾಗೇಶ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಕಾಲಕಾಲಕ್ಕೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದರು. ಆದರೆ, ಈಗಿನ ಉಸ್ತುವಾರಿ ಸಚಿವರು ಜವಾಬ್ದಾರಿಯನ್ನೇ ಮರೆತಿದ್ದಾರೆ. ಆರಂಭದಲ್ಲಿ ನಾನು ಕೋವಿಡ್‍ ಪರಿಸ್ಥಿತಿ ನಿರ್ವಹಣೆಗೆ ಮಾತ್ರ ಉಸ್ತುವಾರಿ ಎನ್ನುತ್ತಿದ್ದವರು ಈಗ ಅಧಿಕೃತ ಸಚಿವರಾಗಿ 4 ತಿಂಗಳಾದರೂ ಸಭೆ ನಡೆಸಿ ಜನರ ಸಮಸ್ಯೆ ಆಲಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.

ಪತ್ರ ಬರೆಯುತ್ತೇನೆ: ‘ಮುನಿರತ್ನ ಅವರು ತೋಟಗಾರಿಕೆ ಸಚಿವರಾಗಿದ್ದರೂ ರೈತರ ಸಮಸ್ಯೆ ಆಲಿಸುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲೆಯ ಸಾಕಷ್ಟು ಅನುದಾನ ವಾಪಸ್‌ ಹೋಗಿದೆ. ಎಲ್ಲಿಂದಲೋ ಬಂದ ಮುನಿರತ್ನ ಅವರಿಗೆ ಜಿಲ್ಲೆಯ ಬಗ್ಗೆ ಏನು ಗೊತ್ತಿದೆ? ಜಿಲ್ಲೆಯ ಜನಪ್ರತಿನಿಧಿಗಳ ಜತೆ ಒಂದು ಸಭೆ ನಡೆಸಿಲ್ಲ. ನಾವು ಏನು ಪಾಪ ಮಾಡಿದ್ದೀವಿ? ನಾನೇ ಸರ್ಕಾರಕ್ಕೆ ಪತ್ರ ಬರೆದು ಬೇರೆಯವರನ್ನು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸುವಂತೆ ಆಗ್ರಹಿಸುತ್ತೇನೆ’ ಎಂದು ಗುಡುಗಿದರು.

‘ಕೋಲಾರವು ರಾಜ್ಯದ ರಾಜಧಾನಿ ಬೆಂಗಳೂರಿಗೆ 70 ಕಿ.ಮೀ ದೂರದಲ್ಲಿದ್ದರೂ ಅಭಿವೃದ್ಧಿ ಇಲ್ಲ. ಈ ಸಂಬಂಧ ಸಚಿವರಿಗೆ ಮನವಿ ಮಾಡಿದ್ದು, ಅವರು ವರ್ತೂರು ಪ್ರಕಾಶ್‌ಗೆ ಜವಾಬ್ದಾರಿ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ರನ್ನು ವೇದಿಕೆಯಲ್ಲಿ ಕೂರಿಸುತ್ತಾರೆ. ಇದು ಶಿಷ್ಟಾಚಾರ ಪಾಲನೆಯೇ? ಇದು ಉಸ್ತುವಾರಿ ಸಚಿವರ ದುರಾಹಂಕಾರದ ಪರಮಾವಧಿ’ ಎಂದು ಕಿಡಿಕಾರಿದರು.

ತಾರತಮ್ಯ ಸರಿಯಲ್ಲ: ‘ಜಿಲ್ಲೆಯಲ್ಲಿ ಹಲವು ಬೆಳೆಗಳಲ್ಲಿ ರೋಗ ಕಾಣಿಸಿಕೊಂಡಿದೆ. ಬೇಸಿಗೆ ಆರಂಭವಾಗಿದ್ದು, ನೀರು ಮತ್ತು ವಿದ್ಯುತ್ ಸಮಸ್ಯೆಯಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇಲ್ಲದ ಕಾರಣ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಉಸ್ತುವಾರಿ ಸಚಿವರು ಕೆಡಿಪಿ ಸಭೆಗೆ ದಿನಾಂಕ ನೀಡುತ್ತಿಲ್ಲ ಎಂದು ಜಿ.ಪಂ ಸಿಇಒ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇತ್ತ ಅಧಿಕಾರಿಗಳೂ ಸಭೆ ನಡೆಸಲ್ಲ, ಸಚಿವರೂ ನಡೆಸಲ್ಲ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಪಕ್ಷದ ಮುಖಂಡರಾದ ಸಿಎಂಆರ್ ಶ್ರೀನಾಥ್, ರಾಮು, ರಮೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.