ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಮಾರಕ, ಹಿಜಾಬ್ ವಿವಾದ ಮುಂದುವರಿಸಬೇಡಿ: ಮುನಿರತ್ನ

Last Updated 8 ಫೆಬ್ರುವರಿ 2022, 14:47 IST
ಅಕ್ಷರ ಗಾತ್ರ

ಕೋಲಾರ: ‘ಹಿಜಾಬ್ ಹೆಸರಿನಲ್ಲಿ ಮುಗ್ಧ ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತುತ್ತಿರುವುದು ಮಾರಕ. ರಾಜಕಾರಣವು ಜನಸೇವೆಗೆ ಇರಬೇಕೇ ಹೊರತು ಶಾಲಾ ಮಕ್ಕಳಲ್ಲಿ ಪ್ರತ್ಯೇಕತೆಯ ಭಾವನೆ ಮೂಡಿಸಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಜಾಬ್‌ ವಿಚಾರವಾಗಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ರಾಜಕಾರಣಿಗಳು ಆಲೋಚನೆ ಮಾಡಬೇಕು. ರಾಜಕಾರಣಕ್ಕೆ ಶಾಲಾ ಕಾಲೇಜು ಮಕ್ಕಳನ್ನು ಬಳಸಿಕೊಳ್ಳುವುದು ಶೋಭೆಯಲ್ಲ. ಮುಗ್ಧ ಮಕ್ಕಳಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತುವವರಿಗಿಂತ ಪಾಪಿಗಳು ಬೇರೊಬ್ಬರಿಲ್ಲ’ ಎಂದು ಕಿಡಿಕಾರಿದರು.

‘ಒಳ್ಳೆಯ ಕೆಲಸ ಪ್ರೋತ್ಸಾಹಿಸಬೇಕೇ ಹೊರತು ಕೆಟ್ಟದ್ದಕ್ಕಲ್ಲ. ಮಕ್ಕಳೆಲ್ಲಾ ಒಟ್ಟಾಗಿ ಪಾಠ ಕಲಿಯಲಿ. ಇದಕ್ಕೆ ಸಂಘ ಸಂಸ್ಥೆಗಳು, ರಾಜಕಾರಣಿಗಳು ಪೂರಕ ವಾತಾವರಣ ಸೃಷ್ಟಿಸಬೇಕು. ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಒತ್ತು ಕೊಡಬೇಕೇ ಹೊರತು ಹಿಜಾಬ್‍ನಂತಹ ವಿವಾದ ಮುಂದುವರಿಸಿಕೊಂಡು ಹೋಗಬಾರದು’ ಎಂದು ಮನವಿ ಮಾಡಿದರು.

‘ಮಕ್ಕಳು ಶಾಲೆಗಳಲ್ಲಿ ನಿಯಮ ಪಾಲಿಸುವುದು ಸೂಕ್ತ. ತಾವು ಪ್ರತ್ಯೇಕವಾಗಿ ಇರುತ್ತೇವೆ, ಬರುತ್ತೇವೆ ಎಂದರೆ ತಪ್ಪಾಗುತ್ತದೆ. ಈ ರೀತಿಯ ವರ್ತನೆ ಒಳ್ಳೆಯ ಸಂಸ್ಕೃತಿಯಲ್ಲ. ಪ್ರತ್ಯೇಕತೆಯ ಮಾತನಾಡುವವರು ದೇಶಕ್ಕೂ ಒಳ್ಳೆಯ ಸಂದೇಶ ನೀಡುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ತಾರತಮ್ಯ ಇರಬಾರದು ಎಂಬ ಕಾರಣಕ್ಕೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒಂದೇ ರೀತಿಯ ಸಮವಸ್ತ್ರ ನೀಡಲಾಗುತ್ತದೆ. ಅದೇ ರೀತಿ ಶಾಲಾ ಕಾಲೇಜು ಪಠ್ಯದಲ್ಲಿನ ಪಾಠ ಎಲ್ಲಾ ಮಕ್ಕಳಿಗೂ ಒಂದೇ. ಸಮವಸ್ತ್ರದಲ್ಲಿ ಏಕೆ ಅನಗತ್ಯ ಗೊಂದಲ ಸೃಷ್ಟಿಸಬೇಕು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಪ್ರೋತ್ಸಾಹ ನೀಡಬೇಕು. ಅದು ಬಿಟ್ಟು ಮಕ್ಕಳನ್ನು ತಪ್ಪು ದಾರಿಗೆ ಎಳೆಯಬಾರದು’ ಎಂದು ಸಲಹೆ ನೀಡಿದರು.

ಗೊಂದಲವಿಲ್ಲ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ಅವರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ವಾಪಸ್‌ ಬಂದ ನಂತರ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ಬಗ್ಗೆ ತಿಳಿಯಲಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿಗಳು ಸ್ನೇಹಜೀವಿಯಾಗಿದ್ದು, ಎಲ್ಲರನ್ನೂ ಜತೆಯಲ್ಲೇ ಕರೆದುಕೊಂಡು ಹೋಗುತ್ತಾರೆ’ ಎಂದರು.

‘ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಸಂಬಂಧ ಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಆದ್ಯತೆ: ‘ರಾಜ್ಯ ಬಜೆಟ್‌ನಲ್ಲಿ ಆಯವ್ಯಯದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಸಿಗಲಿದೆ. ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಕೇವಲ ಭರವಸೆ ಕೊಡುವುದಿಲ್ಲ. ಖಂಡಿತ ಈ ಬಾರಿ ಜಿಲ್ಲೆಗೆ ಶಾಶ್ವತ ದೊಡ್ಡ ಯೋಜನೆ ಕಾರ್ಯಕ್ರಮ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಬಂಗಾರಪೇಟೆ ಪುರಸಭೆ ಕಟ್ಟಡ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಅಧಿಕೃತವಾಗಿ ನಾನೇ ದಿನಾಂಕ ನಿಗದಿಪಡಿಸಿ ಸಂಸದರು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಉದ್ಘಾಟಿಸುತ್ತೇವೆ. ಈ ವಿಚಾರದಲ್ಲಿ ಕೆಲ ವ್ಯಕ್ತಿಗಳು ಸ್ವಯಂ ಘೋಷಣೆ ಮಾಡಿಕೊಂಡು ಸ್ವಾರ್ಥ ರಾಜಕಾರಣ ಮಾಡುವುದು ತಪ್ಪು. ಶಾಸಕರು ಸರ್ಕಾರದ ಭಾಗವಾಗಿದ್ದು, ಆ ಸ್ಥಾನಕ್ಕೆ ಗೌರವವಿದೆ’ ಎಂದು ‍ಪರೋಕ್ಷವಾಗಿ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರನ್ನು ಟೀಕಿಸಿದರು.

‘ಸರ್ಕಾರಿ ಕಚೇರಿಯನ್ನು ಸಾರ್ವಜನಿಕರಿಗೆ ಸೇವೆಗೆ ಮುಕ್ತಗೊಳಿಸಲು ದಿನಾಂಕ ನಿಗದಿಪಡಿಸಿದರೆ ಎಲ್ಲರೂ ಸ್ಪಂದಿಸುತ್ತಾರೆ. ಆದರೆ, ಏಕಾಏಕಿ ಪ್ರಚಾರಕ್ಕಾಗಿ ಕಟ್ಟಡ ಉದ್ಘಾಟನೆ ವಿಚಾರದಲ್ಲಿ ವಿವಾದ ಸೃಷ್ಟಿಸುವುದು ರಾಜಕಾರಣಿಗೆ ಶೋಭೆಯಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT