ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಗರಿಷ್ಠ ಮತ ಸೆಳೆಯಲು ಶಾ ಸೂಚನೆ

ಎರಡನೇ ದಿನವೂ ನಿರಂತರ ರಣತಂತ್ರ ಸಭೆ * ಒಕ್ಕಲಿಗ ಶಾಸಕರಿಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಜವಾಬ್ದಾರಿ
Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಲಿತ ಮತದಾರರನ್ನು ಗರಿಷ್ಠ ಪ್ರಮಾಣದಲ್ಲಿ ಒಲಿಸಿಕೊಳ್ಳಲು ಶ್ರಮ ಹಾಕಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಕ್ಷದ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಬಗ್ಗೆ ದಲಿತರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿ ಬಗ್ಗೆ ಅವರಲ್ಲಿ ವಿಶ್ವಾಸ ಮೂಡಿಸಿ ಪಕ್ಷದತ್ತ ಸೆಳೆಯುವ ಕಾರ್ಯ ಮಾಡಬೇಕು ಎಂದು ಪಕ್ಷದ ಪ್ರಮುಖರ ಸಭೆಯಲ್ಲಿ ಶಾ ತಾಕೀತು ಮಾಡಿದರು. ಗುರುವಾರ ದಿನವಿಡೀ ಪಕ್ಷದ ವಿವಿಧ ವಿಭಾಗಗಳ ಸಭೆಗಳನ್ನು ನಡೆಸಿ, ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಲು ‘ಮಂತ್ರೋಪದೇಶ’ ನೀಡಿದರು ಎಂದು ಮೂಲಗಳು ಹೇಳಿವೆ.

ಅಲ್ಲದೆ, ಒಕ್ಕಲಿಗರು, ಲಿಂಗಾಯತರು ಮತ್ತು ಇತರ ಹಿಂದುಳಿದ ವರ್ಗಗಳ ಜನರ ಸಹಾಯ ಪಡೆಯಬೇಕು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಜೆಡಿಎಸ್ ಕಡೆಗೆ ಹೋಗುವುದನ್ನು ತಡೆಯಲು ಶಾಸಕರಾದ ಆರ್‌.ಅಶೋಕ್‌ ಮತ್ತು ಸಿ.ಟಿ.ರವಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದೂ ತಿಳಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಡೆಯುವ ಉದ್ದೇಶದಿಂದಲೇ ಧರ್ಮ ಒಡೆಯುವ ಕಾರ್ಯಕ್ಕೆ ಕಾಂಗ್ರೆಸ್‌ ಕೈಹಾಕಿತು ಎಂಬ ವಿಚಾರವನ್ನು ಆ ಸಮುದಾಯದ ಜನರಿಗೆ ಮನವರಿಕೆ ಮಾಡಬೇಕು ಎಂದೂ ಶಾ ಸೂಚನೆ ನೀಡಿದರು.

ಆಂತರಿಕ ಸಮೀಕ್ಷೆ ಮಾಹಿತಿ ಪ್ರಕಾರ, ಬೇರು ಮಟ್ಟದಲ್ಲಿ ಕಾರ್ಯಕರ್ತರು ಉತ್ತಮ ಪ್ರಯತ್ನ ನಡೆಸಿದ್ದಾರೆ. ಅಂತಹ ಉತ್ಸಾಹ ನಾಯಕರ ಮಟ್ಟದಲ್ಲಿ ಕಂಡು ಬಂದಿಲ್ಲ. ಈ ಕೊರತೆಯನ್ನು ಸರಿಪಡಿಸಿಕೊಳ್ಳಬೇಕು. ಹೆಚ್ಚು ಆಕ್ರಮಣಕಾರಿಯಾಗಿ ಪ್ರಚಾರ ನಡೆಸಬೇಕು. ಸುಮಾರು 100 ಸ್ಥಾನಗಳವರೆಗೆ ಗೆಲ್ಲುವುದಕ್ಕೆ ತೊಂದರೆ ಇಲ್ಲ. ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹೆಚ್ಚು ಶ್ರಮದ ಅಗತ್ಯವಿದೆ ಎಂದು ಮುಖಂಡರಿಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೇ ಕಟ್ಟಿ ಹಾಕಲು ರಣತಂತ್ರವನ್ನು ರೂಪಿಸಬೇಕು. ಒಂದು ವೇಳೆ ಅವರು ಬಾದಾಮಿಯಲ್ಲಿ ಸ್ಪರ್ಧಿಸಿದರೆ, ಅಲ್ಲಿ ಯಾವ ತಂತ್ರಗಳನ್ನು ಅನುಸರಿಸಬೇಕು ಎಂಬ ಬಗ್ಗೆಯೂ ಚರ್ಚಿಸಿದರು.

ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಸಂದರ್ಭ ಸುಮಾರು 1 ಕೋಟಿಗೂ ಹೆಚ್ಚು ಜನ ಸದಸ್ಯತ್ವ ಪಡೆದಿದ್ದರು. ಇವರನ್ನು ಮತ್ತೆ ಸಂಪರ್ಕಿಸಿ, ತಾವು ಮಾತ್ರವಲ್ಲದೆ ಪಕ್ಷದ ಪರವಾಗಿ ಮತ ಹಾಕಲು ಇನ್ನೊಬ್ಬರನ್ನೂ ಮನವೊಲಿಸುವಂತೆ ಕೋರಬೇಕು. ಇದಕ್ಕಾಗಿ 224 ಕ್ಷೇತ್ರಗಳಲ್ಲೂ ಕಾಲ್‌ ಸೆಂಟರ್‌ಗಳನ್ನು ತಕ್ಷಣವೇ ಆರಂಭಿಸಬೇಕು ಎಂದೂ ಸಲಹೆ ನೀಡಿದರು.

ರಾಜ್ಯಕ್ಕೆ ಮೋದಿ ಅವರನ್ನು ಕರೆಸುವುದರಿಂದ ಯುವ ಮತದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ.  ಆದ್ದರಿಂದ ಸಮಾವೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಬೇಕು. ಅದಕ್ಕೆ ಅಗತ್ಯವಿರುವ ಕ್ರಮಗಳನ್ನುತೆಗೆದುಕೊಳ್ಳಬೇಕು ಎಂದೂ ಶಾ ಹೇಳಿದರು.

‘ಭ್ರಷ್ಟಾಚಾರ ಪಟ್ಟಿ: ಸಿದ್ದರಾಮಯ್ಯ ಪ್ರಶ್ನೆಗೆ ಎಡಗೈ ಮಣಿಕಟ್ಟಲ್ಲೇ ಉತ್ತರ’
ಬೆಂಗಳೂರು:
ಬಿಜೆಪಿಯ ಭ್ರಷ್ಟಾಚಾರದ ಪಟ್ಟಿಯನ್ನು ನೀಡಿ ಎಂದು ಸಿದ್ದರಾಮಯ್ಯ ಬಲಗೈಯಲ್ಲಿ ಕೇಳಿದ್ದಾರೆ. ಇದಕ್ಕೆ ಉತ್ತರ ಅವರ ಎಡಗೈ ಮಣಿಕಟ್ಟಿನಲ್ಲಿಯೇ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಬಳಿಯಲ್ಲಿರುವ ಆ ವಾಚನ್ನು ಯಾರು ಕೊಟ್ಟಿದ್ದು, ಏಕೆ ಕೊಟ್ಟಿದ್ದು, ಯಾವ ಕೆಲಸವನ್ನು ಮಾಡಿಕೊಟ್ಟಿದ್ದಕ್ಕೆ ನೀಡಿದ್ದಾರೆ ಎಂಬ ನಮ್ಮ ಪ್ರಶ್ನೆಗೆ ಅವರು ಉತ್ತರಿಸುವುದೇ ಇಲ್ಲ. ಇನ್ನು ಹಿಂದುಳಿದವರ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿದ್ದೇವೆ ಎಂದು ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ, ರೈತರ ಆತ್ಮಹತ್ಯೆ, ಯುವಕರಿಗೆ ಉದ್ಯೋಗ ಸೌಲಭ್ಯ... ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಹಿಂದುಳಿದವರ ಜನಸಂಖ್ಯೆ ಹೆಚ್ಚಿದೆ. ಆದರೆ, ಅವರಿಗೆ ಮೀಸಲಿಟ್ಟಿರುವ ಬಜೆಟ್‌ ಪ್ರಮಾಣ ಮಾತ್ರ ಅತ್ಯಲ್ಪ ಎಂದರು.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೆ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಆದರೆ, ಬಿಜೆಪಿಗೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಅದು ಬಾಕಿ ಉಳಿದಿದೆ ಎಂದರು.

ಕನ್ನಡ ನಾಡು, ನುಡಿಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಕುವೆಂಪು, ದ.ರಾ.ಬೇಂದ್ರೆ, ವಿಶ್ವೇಶ್ವರಯ್ಯ ಅವರಂತಹ ಕನ್ನಡದ ಕವಿಗಳ, ಸಾಧಕರ ಜಯಂತಿ ಮಾಡಬೇಕು ಎಂದು ಅನಿಸುವುದೇ ಇಲ್ಲ. ಆದರೆ, ಟಿ‍ಪ್ಪು ಜಯಂತಿಗೆ ಪಟ್ಟು ಹಿಡಿಯುತ್ತಾರೆ. ಇದರ ಹಿಂದಿನ ಕುತಂತ್ರವನ್ನು ಜನ ತಿಳಿಯಬೇಕು ಎಂದರು.

‘ಸಾಮಾನ್ಯ ಉದ್ಯೋಗವೇ ಶ್ರೇಷ್ಠ’
ಪಕೋಡ ಮಾಡುವವರ ಜೊತೆಗೆ ಭಿಕ್ಷುಕರಿಗೂ ಸಾಲ ನೀಡಿ ಎಂದು ಪಿ.ಚಿದಂಬರಂ ಹಾಸ್ಯ ಮಾಡಿದ್ದಾರೆ. ‘ಚಿದಂಬರಂ ಅವರೇ ನೀವು ಶ್ರೀಮಂತರ ಕುಟುಂಬದಲ್ಲಿ ಹುಟ್ಟಿದ್ದೀರಿ, ಬಡ ಜನರ ದುಃಖ ನಿಮಗೆ ತಿಳಿಯದು. ಸ್ವಾಭಿಮಾನದಿಂದ ಪಕೋಡ ಮಾಡುವ ಉದ್ಯೋಗ ಯಾವ ಟಾಟಾ, ಬಿರ್ಲಾ, ಅಂಬಾನಿ ಅವರ ಉದ್ಯೋಗಕ್ಕಿಂತಲೂ ಕಡಿಮೆಯಿಲ್ಲ. ನಮಗೆ ಸಾಮಾನ್ಯ ವ್ಯಕ್ತಿಗಳೇ ಮುಖ್ಯ’ ಎಂದರು.

ಅಭಿವೃದ್ಧಿ ಎಂಬ ರೈಲಿಗೆ ಕೇಂದ್ರದಲ್ಲಿ ಮೋದಿಯೆಂಬ ಒಂದು ಎಂಜಿನ್ ಇದೆ. ಅದಕ್ಕೆ ರಾಜ್ಯದಲ್ಲಿ ಯಡಿಯೂರಪ್ಪ ಎಂಬ ಎರಡನೇ ಎಂಜಿನ್ ಜೋಡಿಸಿ ಅದರ ವೇಗವನ್ನು ಹೆಚ್ಚಿಸಿ. ಬೆಂಗಳೂರಿನಲ್ಲಿ ಕನಿಷ್ಠ 18 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆ’ ಎಂದರು.

‘ವಿದ್ಯುತ್‌ ಒಪ್ಪಂದಕ್ಕೆ ಮರುಜೀವ’
ಬೆಂಗಳೂರು:
‘ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಇಲ್ಲಿನ ಜನರ ಅನುಕೂಲಕ್ಕಾಗಿ ನಮ್ಮ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕಲ್ಲಿದ್ದಲು ವಿದ್ಯುತ್‌ ಘಟಕಕ್ಕೆ ಮರುಜೀವ ನೀಡಲಾಗುತ್ತದೆ’ ಎಂದು ಛತ್ತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT