ಕೋಲಾರ: ‘ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿ ವಿರುದ್ಧ ಏಕವಚನದಲ್ಲಿ, ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ತಪ್ಪಿದ್ದರೆ ನೀವು ದೂರಿನಂತೆ ತನಿಖೆ ಆಗಲಿ. ಅದನ್ನು ಬಿಟ್ಟು ಅಧಿಕಾರಿಗಳ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಜಿ.ಮಂಜುನಾಥ್, ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ಬಿಜೆಪಿಯವರು ಮಾಡಿಕೊಳ್ಳಲಿ’ ಎಂದರು.
ಮಲ್ಲಿಕಾರ್ಜುನ ಖರ್ಗೆ ಕೋಲಾರದಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬುದಕ್ಕೆ, ‘ಲೋಕಸಭಾ ಚುನಾವಣೆಯ ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು, ಹಿರಿಯರಾದ ರಮೇಶ್ ಕುಮಾರ್, ನಸೀರ್ ಅಹ್ಮದ್ ಇದ್ದಾರೆ. ವರಿಷ್ಠರೊಂದಿಗೆ ಚರ್ಚಿಸಿ ಯಾರು ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಲಿದ್ದಾರೆ. ಖರ್ಗೆ ಕೋಲಾರಕ್ಕೆ ಬಂದು ಸ್ಪರ್ಧಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ಖಡ್ಗ ಹಿಡಿದಿದ್ದಕ್ಕೆ ಪ್ರಕರಣ ದಾಖಲಾಗಿರುವ ಸಂಬಂಧ, ‘ಕಾನೂನಿಗೆ ವಿರುದ್ಧವಾಗಿ ಕತ್ತಿ ಹಿಡಿದು ಪ್ರದರ್ಶನ ಮಾಡುವುದು ತಪ್ಪು. ಯಾರೇ ಆಗಲಿ ಕೇಸು ದಾಖಲಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಕ್ಲಾಕ್ ಟವರ್‌ನಲ್ಲಿ ಕತ್ತಿ ಅಳವಡಿಕೆ ಸಂಬಂಧ ನಗರಸಭೆ, ಜಿಲ್ಲಾಡಳಿತ ಏನು ಅನುಮತಿ ನೀಡಿರುತ್ತದೆಯೋ ಅದರಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಏನಾದರೂ ಮಾಡಲು ಹೋದರೆ ಅದು ತಪ್ಪು’ ಎಂದರು.
‘ಅಪರಾಧ ಪ್ರಕರಣ ಹೆಚ್ಚುತ್ತಿರುವ ಮಾಹಿತಿ ನನಗೂ ಇದೆ. ಗಾಂಜಾ, ಡ್ರಗ್ಸ್ ಪ್ರಕರಣ, ಕೊಲೆ ಹೆಚ್ಚುತ್ತಿವೆ. ಈ ಸಂಬಂಧ ಚರ್ಚಿಸಿ ಸೂಚನೆ ನೀಡಲಾಗಿದೆ. ತಂಡ ಕೂಡ ರಚನೆ ಮಾಡಲಾಗಿದೆ. ಜನ ಕೆಟ್ಟು ಹೋಗಿದ್ದು, ಉತ್ತಮ ಶಿಕ್ಷಣ, ಉದ್ಯೋಗದ ಅಗತ್ಯವಿದೆ. ಬಿಜೆಪಿ ಸರ್ಕಾರದಲ್ಲೂ ಇದೇ ಪರಿಸ್ಥಿತಿ ಇತ್ತು. ತಡೆಗಟ್ಟಲು ಸಮಸ್ಯಗೆ ಪರಿಹಾರ ನೀಡಬೇಕಿದೆ’ ಎಂದು ಹೇಳಿದರು.
ಮುನಿಯಪ್ಪ ಬಣ, ರಮೇಶ್‌ಕುಮಾರ್ ಬಣ ಒಟ್ಟಿಗೆ ಬಂದಿದ್ದೀರಿ ಎಂಬುದಕ್ಕೆ, ‘ಜಿಲ್ಲಾ ಅಧ್ಯಕ್ಷರು ಕರೆದಾಗ ಎಲ್ಲರೂ ಬಾಯಿ ಮುಚ್ಚಿಕೊಂಡು ಒಟ್ಟಿಗೆ ಬರುತ್ತೇವೆ. ಅದು ನಮ್ಮ ಪಕ್ಷದ ಸಿದ್ಧಾಂತ. ಯಾವುದೇ ಬಣ ಇಲ್ಲ. ಕಾಂಗ್ರೆಸ್ ಪಕ್ಷದ ಬಣ ಅಷ್ಟೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.