ಶನಿವಾರ, ಸೆಪ್ಟೆಂಬರ್ 25, 2021
29 °C

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ನಿಂತಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಹಿಂಪಡೆದರೂ ಧೃತಿಗೆಟ್ಟಿಲ್ಲ. ವಿಶೇಷ ಅನುದಾನದಡಿ ಅಭಿವೃದ್ಧಿ ಕೆಲಸ ಮುಂದುವರಿಸಲಾಗುತ್ತಿದೆ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಆಲಂಬಾಡಿ ಜೋತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜಗ ಗ್ರಾಮದಿಂದ ದೆಬ್ಬನಹಳ್ಳಿಗೆ ಸಂಪರ್ಕ ಕಲ್ಪಿಸುವ ₹ 60 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಈ ಕಾಮಗಾರಿಗಳಿಗೆ ವಿಶೇಷ ಅನುದಾನದಡಿ ₹ 5 ಕೋಟಿ ಬಿಡುಗಡೆ ಮಾಡಿದ್ದರು. ಆದರೆ, ಈಗಿನ ಸರ್ಕಾರ ಆ ಅನುದಾನವನ್ನು ತಡೆಹಿಡಿದಿತ್ತು. ಎರಡು ವರ್ಷದ ಹೋರಾಟದ ಫಲವಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ಪರಪ್ಪ ಅವರಿಗೆ ಮನವಿ ಸಲ್ಲಿಸಿ ಮತ್ತೆ ಅನುದಾನ ತರಲಾಯಿತು ಎಂದರು.

‘ಜನರ ಕಣ್ಣೊರೆಸುವ ತಂತ್ರ ಅನುಸರಿಸದೆ ಪ್ರಾಮಾಣಿಕವಾಗಿ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದೇನೆ. ಇದಕ್ಕೆ ಪ್ರತಿಫಲವಾಗಿ ಮತದಾರರು ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ’ ಎಂದರು.

ತೊಪ್ಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಳವಂಚಿ ಗ್ರಾಮದಿಂದ ಬೂವನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹ 55 ಲಕ್ಷ, ಮುಷ್ಟ್ರಹಳ್ಳಿಯಿಂದ ಬೊಗ್ಗಲಹಳ್ಳಿ ರಸ್ತೆಗೆ ₹ 35 ಲಕ್ಷ ಮಂಜೂರಾಗಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಚೌಡಮ್ಮ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ. ನಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವ್, ಎಸ್.ಕೆ. ವೆಂಕಟರಾಮ್, ರಮೇಶ್, ಮುನಿಸ್ವಾಮಿ, ಮಂಜುನಾಥ್, ಸುರೇಶ್, ಪೊಲೀಸ್ ಶ್ರೀನಿವಾಸ್, ವಕೀಲ ರಾಮೇಗೌಡ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.