ಮಂಗಳವಾರ, ಮಾರ್ಚ್ 28, 2023
31 °C
ದೈಹಿಕವಾಗಿ ಮಕ್ಕಳು ಸದೃಢ

ಮೊಟ್ಟೆ ವಿತರಣೆ ಎಲ್ಲಾ ಜಿಲ್ಲೆಗೆ ವಿಸ್ತರಿಸಿ: ಆಹಾರ ತಜ್ಞ ರಘು ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸರ್ಕಾರ 7 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಕೋಳಿ ಮೊಟ್ಟೆ ಕೊಡುತ್ತಿದ್ದು, ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವುದು ಒಳಿತು’ ಎಂದು ಆಹಾರ ತಜ್ಞ ಕೆ.ಸಿ.ರಘು ಅಭಿಪ್ರಾಯಪಟ್ಟರು.

‘ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ಅನಿವಾರ್ಯ’ ವಿಚಾರ ಕುರಿತು ಜನಾಧಿಕಾರ ಚಳವಳಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಮಧ್ಯಾಹ್ನದ ಬಿಸಿಯೂಟ ಅತ್ಯುತ್ತಮ ಯೋಜನೆ. ಪೌಷ್ಟಿಕವಾದ ಮೊಟ್ಟೆ ಕೊಟ್ಟರೆ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ’ ಎಂದರು.

‘ಅಪೌಷ್ಟಿಕತೆ ನಿವಾರಣೆಗೆ ಪ್ರೋಟಿನ್‌, ಕೊಬ್ಬಿನಾಂಶ ಅತ್ಯಗತ್ಯ. ಬಹುಸಂಖ್ಯಾತ ಮಕ್ಕಳು ಮೊಟ್ಟೆ ಇಷ್ಟಪಟ್ಟು ತಿನ್ನುವುದರಿಂದ ಮೊಟ್ಟೆಯನ್ನು ಎಲ್ಲಾ ಜಿಲ್ಲೆಯ ಮಕ್ಕಳಿಗೆ ನೀಡಿದರೆ ಒಳಿತು. ಮೊಟ್ಟೆ ಇಷ್ಟಪಡದ ಮಕ್ಕಳಿಗೆ ಬಾಳೆಹಣ್ಣು ನೀಡುವ ಬದಲು ಕೊಬ್ಬಿನಾಂಶ ಮತ್ತು ಪ್ರೋಟಿನ್‌ಯುಕ್ತ ಇತರೆ ಆಹಾರ ಪದಾರ್ಥ ನೀಡಬಹುದು. ಏನೇ ಕೊಟ್ಟರೂ ಮಕ್ಕಳು ಇಷ್ಟಪಟ್ಟು ತಿನ್ನುವಂತಿರಬೇಕು’ ಎಂದು ತಿಳಿಸಿದರು.

‘ಆಹಾರ ಅವರವರ ಸಾಂಸ್ಕೃತಿಕ ಪದ್ಧತಿ ಅನುಸಾರ ಅಭ್ಯಾಸವಾಗಿರುತ್ತೆ. ಇದನ್ನು ಕೀಳಾಗಿ ನೋಡುವುದು ಸರಿಯಲ್ಲ. ಏಕರೂಪ ಆಹಾರ ಪದ್ಧತಿ ಮಾನವ ವಿರೋಧಿ ಮಾತ್ರವಲ್ಲ, ಪ್ರಕೃತಿ ವಿರೋಧಿ ಸಹ. ಸರ್ಕಾರ ಮೊಟ್ಟೆ ನೀಡಿಕೆ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಮುಂದಾಗಲಿ’ ಎಂದು ಚಿತ್ರ ನಿರ್ದೇಶಕ ಅಭಿಗೌಡ ಆಶಿಸಿದರು.

‘ಮಕ್ಕಳಿಗೆ ಕೋಳಿ ಮೊಟ್ಟೆ ಕೊಡುವ ಕೂಗಿನ ಹಿಂದೆ ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ಬಾಳೆ ಹಣ್ಣಿನಿಂದ ಪೌಷ್ಟಿಕ ಆಹಾರ ಒದಗಿಸುವುದು ಕಷ್ಟಸಾಧ್ಯ. ಪ್ರತಿ ಮಗುವಿಗೂ ಮೊಟ್ಟೆ ಕೊಟ್ಟರೆ ಅನುಕೂಲ. ಕೋಲಾರ ಜಿಲ್ಲೆಯಲ್ಲೂ ಮಕ್ಕಳಿಗೆ ಮೊಟ್ಟೆ ಕೊಡುವ ಅಗತ್ಯ ಜರೂರಾಗಿದೆ’ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ಆರೋಗ್ಯವಂತ ಮಗು: ‘ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡಿದರೆ ಹೆರಿಗೆ ಸಂದರ್ಭದಲ್ಲಿ ಆರೋಗ್ಯವಂತ ಮಗು ಜನಿಸಲು ಸಾಧ್ಯವಾಗುತ್ತದೆ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ತಿಳಿಸಿದರು.

‘ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಜತೆಗೆ ಕೋಳಿ ಮೊಟ್ಟೆ ನೀಡಬೇಕು. ಈ ನಿಟ್ಟಿನಲ್ಲಿ ಸಂಘಟನೆಯು ಹಂತ ಹಂತವಾಗಿ ಹೋರಾಟ ರೂಪಿಸಲಿದೆ. ಅಲ್ಲದೇ, ಜನಾಭಿಪ್ರಾಯ ಸಂಗ್ರಹಣೆಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತದೆ’ ಎಂದು ಜನಾಧಿಕಾರ ಚಳವಳಿ ಸಂಘಟನೆ ಅಧ್ಯಕ್ಷ ಸಿ.ವಿ.ನಾಗರಾಜ್ ವಿವರಿಸಿದರು.

ಜನಾಧಿಕಾರ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜಪ್ಪ, ಮಾಜಿ ಅಧ್ಯಕ್ಷ ಕೆ.ರಾಮಮೂರ್ತಿ, ಜನಶಕ್ತಿರಂಗ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಜೀವಯ್ಯ, ಆದಿಮ ಸಾಂಸ್ಕೃತಿಕ ಕೇಂದ್ರದ ಖಜಾಂಚಿ ಹ.ಮಾ.ರಾಮಚಂದ್ರ, ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು