ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಸಂಘದ ಚುನಾವಣೆ: ಬೆಂಬಲಕ್ಕೆ ಮನವಿ

Last Updated 19 ಜುಲೈ 2019, 14:51 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಸರ್ಕಾರಿ ಸೌಕರರ ಸಂಘದ ಅಧ್ಯಕ್ಷಗಾದಿ ಸೇರಿದಂತೆ ವಿವಿಧ ಸ್ಥಾನಗಳಿಗೆ ಆ.8ರಂದು ನಡೆಯುವ ಚುನಾವಣೆಗೆ ಸ್ವಾಭಿಮಾನಿ ನೌಕರರ ವೇದಿಕೆಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ನೀಡಬೇಕು’ ಎಂದು ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಜಿ.ಜಗದೀಶ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದೇನೆ. ಖಜಾಂಜಿ ಸ್ಥಾನಕ್ಕೆ ಆರ್‌.ನಾಗರಾಜ್‌ ಮತ್ತು ರವಿ ಗುಂಜಿಕರ ಆಕಾಂಕ್ಷಿಗಳಾಗಿದ್ದು, ಈ ಇಬ್ಬರಲ್ಲಿ ಒಬ್ಬರು ಮಾತ್ರ ವೇದಿಕೆ ಪರವಾಗಿ ಅಂತಿಮ ಕಣದಲ್ಲಿರುತ್ತಾರೆ’ ಎಂದರು.

‘ಸ್ವಾತಂತ್ರ್ಯ ಪೂರ್ವದಿಂದಲೂ ಸಂಘದ ಸಂಘಟನೆ ಅಸ್ಥಿತ್ವದಲ್ಲಿದ್ದು, ಸಂಘವು ಸುಮಾರು 100 ವರ್ಷದ ಇತಿಹಾಸ ಹೊಂದಿದೆ. ರಾಜ್ಯದಲ್ಲಿ ಪ್ರಸ್ತುತ 5.40 ಲಕ್ಷ ಮಂದಿ ಸರ್ಕಾರಿ ನೌಕರರು ಸದಸ್ಯತ್ವ ಹೊಂದಿದ್ದು, 202 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಸದಸ್ಯತ್ವ, ತಾಲ್ಲೂಕು ಸಂಘ ಮತ್ತು ಜಿಲ್ಲಾ ಮಟ್ಟದ ಸಂಘಗಳಿಗೆ ಸೇರಿದಂತೆ 3 ಹಂತದ ಚುನಾವಣೆ ನಡೆದಿದೆ. ಜುಲೈ 17ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ’ ಎಂದು ಹೇಳಿದರು.

‘ಸರ್ಕಾರಿ ನೌಕರರ ಸಂಘವು ಹಲವು ದಶಕಗಳಷ್ಟು ಹಳೆಯದಾದರೂ ಚುನಾಯಿತ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಸಮಾನ ವೇತನ ರಾಜ್ಯ ಮಟ್ಟದಲ್ಲಿ ಜಾರಿಯಾಗುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

‘ಕೇಂದ್ರೀಯ ಪ್ರಜಾಸತ್ತಾತ್ಮಕ ತತ್ವದಡಿ ಅಧಿಕಾರ ವಿಕೇಂದ್ರೀಕರಣವಾಗುವಂತೆ ಸಮಗ್ರವಾಗಿ ಬೈಲಾ ತಿದ್ದುಪಡಿ ಮಾಡುವುದು, ನಾಗರೀಕ ಸೇವಾ ನಿಯಮಗಳು ಆಧುನಿಕತೆಗೆ ಪೂರಕವಾಗಿ ವರ್ಗಾವಣೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಲು ಒತ್ತು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡದೆ ನೌಕರರ ಮೇಲೆ ಕಾರ್ಯ ಒತ್ತಡ ಹೇರಲಾಗುತ್ತಿದೆ. ಕಾಲ ಕಾಲಕ್ಕೆ ಬಡ್ತಿ ಅನುಷ್ಠಾನಕ್ಕೆ ತರಲು ಹಾಗೂ ನೌಕರರ ಬೇಡಿಕೆ ಈಡೇರಿಕೆಗೆ ಸ್ವಾಭಿಮಾನಿ ನೌಕರರ ವೇದಿಕೆಯನ್ನು ಬೆಂಬಲಿಸಬೇಕು’ ಎಂದು ಕೋರಿದರು.

ಸ್ವಾಭಿಮಾನಿ ನೌಕರರ ವೇದಿಕೆಯ ವಿವಿಧ ಜಿಲ್ಲಾ ಘಟಕದ ಅಧ್ಯಕ್ಷರಾದ ಆರ್‌.ನಾಗರಾಜ್‌, ರವಿ ಗುಂಜಿಕರ, ಮೆಹಬೂಬ್‌ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT