ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ರಂಗದಿಂದ ಮಹಿಳೆಯರ ಸಬಲೀಕರಣ: ಗೋವಿಂದಗೌಡ ಹೇಳಿಕೆ

ಪ್ರತಿ ಕುಟುಂಬಕ್ಕೆ ಸಹಕಾರಿ ಸದಸ್ಯತ್ವ ನೀಡಬೇಕು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ
Last Updated 27 ಮೇ 2022, 15:08 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರಿ ವ್ಯವಸ್ಥೆ ಉಳಿದರೆ ಮಾತ್ರ ಬಡವರು ಉಳಿಯುತ್ತಾರೆ. ಸಹಕಾರಿ ವ್ಯವಸ್ಥೆ ಬಗ್ಗೆ ಇನ್ನೂ ಅರಿವು ಮೂಡದಿರುವುದು ದುರಂತ. ಪ್ರತಿ ಕುಟುಂಬಕ್ಕೂ ಸಹಕಾರಿ ಸದಸ್ಯತ್ವ ನೀಡುವ ಅಗತ್ಯವಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಬೆಳೆಗಾರರ ಹಾಗೂ ಸೇವಾ ಸಹಕಾರ ಸಂಘದ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಸಹಕಾರಿ ವ್ಯವಸ್ಥೆಯಿಂದ ಮಾತ್ರ ಕಟ್ಟಕಡೆಯ ಬಡವನಿಗೂ ಸಾಲ ಸೌಲಭ್ಯ ಸಿಗಲು ಸಾಧ್ಯ. ಹೀಗಾಗಿ ಪ್ರತಿ ಕುಟುಂಬವನ್ನು ಸಹಕಾರ ರಂಗ ತಲುಪಬೇಕಿದೆ’ ಎಂದು ಹೇಳಿದರು.

‘ಡಿಸಿಸಿ ಬ್ಯಾಂಕ್‌ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ಕಲ್ಪಿಸುತ್ತಿದೆ. ಆದರೆ, ಜನರು ಸೌಲಭ್ಯ ಪಡೆದುಕೊಂಡು ತಮ್ಮ ಉಳಿತಾಯದ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇಡುವುದು ಯಾವ ನ್ಯಾಯ? ರೈತರು ಭಿಕ್ಷುಕರಲ್ಲ, ಸ್ವಾವಲಂಬಿ ಬದುಕು ನಡೆಸುತ್ತಿರುವವರು. ಮಹಿಳೆಯರು, ಅನ್ನದಾತರ ಸಬಲೀಕರಣ ಸಹಕಾರ ರಂಗದಿಂದ ಸಾಧ್ಯ. ಸಹಕಾರಿ ವ್ಯವಸ್ಥೆ ಉಳಿಸಬೇಕೆಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು’ ಎಂದು ಆಶಿಸಿದರು.

‘ರೈತರು ಮತ್ತು ಮಹಿಳೆಯರು ಉಳಿತಾಯದ ಹಣವನ್ನು ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ಬಲವರ್ಧನೆಗೆ ಸಹಕಾರ ನೀಡಬೇಕು. ಎಷ್ಟೇ ಆರೋಪ, ದೂರು ಬಂದರೂ ಮತ್ತಷ್ಟು ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇವೆ’ ಎಂದು ಹೇಳಿದರು.

ಸಮನ್ವಯತೆಯಿಂದ ಅಭಿವೃದ್ಧಿ: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಅವಳಿ ಜಿಲ್ಲೆಯಲ್ಲಿ ಸರ್ವ ಸದಸ್ಯರ ಮಹಾಸಭೆ ನಡೆಸುತ್ತಿರುವ ಹೆಗ್ಗಳಿಕೆ ಕಡಗಟ್ಟೂರು ಸೊಸೈಟಿಯದ್ದಾಗಿದೆ. ಇದು ಬಹಳ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸೊಸೈಟಿ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಸಮನ್ವಯತೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. 2014ರ ಪೂರ್ವದಲ್ಲಿ ಡಿಸಿಸಿ ಬ್ಯಾಂಕ್‌ ಹಾಲಿನ ಬಿಲ್ ಕೊಡಲಾಗದ ಸ್ಥಿತಿಯಲ್ಲಿತ್ತು. ವೈದ್ಯನಾಥನ್ ವರದಿ ಆಧಾರದ ಮೇಲೆ ಚುನಾವಣೆ ನಡೆಯಿತು. ಆ ನಂತರ ಬ್ಯಾಂಕ್‌ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ’ ಎಂದು ಹೇಳಿದರು.

‘ಸೊಸೈಟಿಯಿಂದ ₹ 30 ಕೋಟಿ ವಿವಿಧ ಸಾಲ ನೀಡಲಾಗಿದ್ದು, ಫಲಾನುಭವಿಗಳು ಶೇ 100ರಷ್ಟು ಮರುಪಾವತಿ ಮಾಡುತ್ತಿರುವುದರಿಂದ ಸೊಸೈಟಿ ಸಾಧನೆಗೆ ಕಾರಣರಾಗಿದ್ದಾರೆ’ ಎಂದು ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ, ಸೊಸೈಟಿ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ವೆಂಕಟೇಶ್, ಕೆ.ಎಸ್.ಕೃಷ್ಣಪ್ಪ, ಮುನಿರಾಜ, ಡಿ.ರಾಜಣ್ಣ, ಮಂಜುನಾಥ್, ಅಮರೇಶ್, ವಿಜಯಮ್ಮ, ಚೌಡರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT