ಬುಧವಾರ, ನವೆಂಬರ್ 25, 2020
19 °C
ನಗರಸಭೆ ಆಯುಧ ಪೂಜೆಯಲ್ಲಿ ಶಾಸಕ ಶ್ರೀನಿವಾಸಗೌಡ ಗುಡುಗು

ಒತ್ತುವರಿ ತೆರವು: ರಾಜಿ ಪ್ರಶ್ನೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಸ್ತೆಗಳು ಹಾಗೂ ನಗರಸಭೆ ಆಸ್ತಿಗಳ ಒತ್ತುವರಿ ತೆರವಿನ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿಸುತ್ತೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಗುಡುಗಿದರು.

ಇಲ್ಲಿ ಗುರುವಾರ ನಗರಸಭೆಯಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಒತ್ತುವರಿ ತೆರವಿಗೆ ನಗರಸಭೆಯಿಂದ ಸದ್ಯದಲ್ಲೇ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಸಾರ್ವಜನಿಕರ ಹಿತಕ್ಕಾಗಿ ನಗರಸಭೆ ಆಸ್ತಿಗಳನ್ನು ರಕ್ಷಿಸಬೇಕು. ಇದರಲ್ಲಿ ವೈಯಕ್ತಿಕ ಉದ್ದೇಶವಿಲ್ಲ. ಜನರು ಕಾರ್ಯಾಚರಣೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಕೋಲಾರ ನಗರಸಭೆಯನ್ನು ಒಂದು ವರ್ಷದಲ್ಲಿ ಮಾದರಿ ನಗರಸಭೆಯಾಗಿ ಮಾಡುತ್ತೇವೆ. ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಹೆಚ್ಚು ಒತ್ತು ಕೊಟ್ಟು ಕೋಲಾರವನ್ನು ಸ್ವಚ್ಛ ನಗರವಾಗಿ ಮಾಡುತ್ತೇವೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಲ ರಸ್ತೆಗಳ ವಿಸ್ತರಣೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ರಸ್ತೆ ಅಕ್ಕಪಕ್ಕದ ಕಟ್ಟಡಗಳನ್ನು ತೆರವು ಮಾಡುತ್ತಿರುವುದು ನೋವಿನ ಸಂಗತಿ’ ಎಂದರು.

‘ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ತೆರವು ಮಾಡುವುದು ಅನಿವಾರ್ಯ. ಪರಿಸ್ಥಿತಿ ಅರಿತು ಜನರು ಕಟ್ಟಡ ತೆರವಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ನಗರ ಬೆಳೆದಂತೆ ಜನಸಂಖ್ಯೆ ಹೆಚ್ಚುತ್ತಿದೆ. ನಗರವಾಸಿಗಳು ಮೂಲಸೌಕರ್ಯದಿಂದ ವಂಚಿತರಾಗದಂತೆ ಕ್ರಮ ಕೈಗೊಂಡು ನಗರವನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಕಾಮಗಾರಿ ವಿಳಂಬ: ‘ಕೆಲವೆಡೆ ರಸ್ತೆಗಳ ದುರಸ್ತಿ ಕಾರ್ಯದ ಜತೆಗೆ ಇತರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬವಾಗಿದೆ. ಸಾಧ್ಯವಾದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ನಗರದ ಕಸದ ವಿಲೇವಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಕೆಂದಟ್ಟಿ ಗ್ರಾಮದ ಸಮೀಪ 2 ಎಕರೆ ಜಮೀನು ಗುರುತಿಸಲಾಗಿದೆ. ಆ ಜಮೀನಿನಲ್ಲಿ ಕಸದಿಂದ ಕಾಂಪೋಸ್ಟ್‌ ಗೊಬ್ಬರ ಉತ್ಪಾದಿಸುವ ಗುರಿಯಿದೆ. ಕಾಂಪೋಸ್ಟ್‌ ತಯಾರಿಕಾ ಘಟಕ ಸದ್ಯದಲ್ಲೇ ಕಾರ್ಯಾರಂಭ ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

ನೇಮಕಾತಿಗೆ ಮೀನಮೇಷ: ‘ನಗರದ ಜನಸಂಖ್ಯೆಗೆ ಹೋಲಿಸಿದರೆ ನಗರಸಭೆಯಲ್ಲಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಯ ಸಂಖ್ಯೆ ಕಡಿಮೆಯಿದೆ. ಸರ್ಕಾರ ಪೌರ ಕಾರ್ಮಿಕರ ನೇಮಕಾತಿಗೆ ಮೀನಮೇಷ ಎಣಿಸುತ್ತಿದೆ. ನಗರಸಭೆಯಲ್ಲಿನ ಕೆಲ ಹುದ್ದೆಗಳ ನೇಮಕಾತಿಗೆ ಆಯುಕ್ತರು ಸರ್ಕಾರದಿಂದ ಅನುಮತಿ ಪಡೆದಿದ್ದಾರೆ. ಹೆಚ್ಚಿನ ಪೌರ ಕಾರ್ಮಿಕರ ನೇಮಕಾತಿಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದರು.

‘ನಗರದಲ್ಲಿ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದೆ. ಜನರು ನಗರಸಭೆಗೆ ಸಕಾಲಕ್ಕೆ ತೆರಿಗೆ ಪಾವತಿಸಬೇಕು. ಇಷ್ಟು ದಿನಗಳಿಂದ ಕೋವಿಡ್ ಆತಂಕ ಹೆಚ್ಚಿದ್ದರಿಂದ ತೆರಿಗೆ ಪಾವತಿಗೆ ಅಧಿಕಾರಿಗಳು ಒತ್ತಾಯಿಸಿರಲಿಲ್ಲ. ನಗರವಾಸಿಗಳು ಜವಾಬ್ದಾರಿ ಅರಿತು ತೆರಿಗೆ ಪಾವತಿಸಿದರೆ ನಗರದ ಅಭಿವೃದ್ಧಿಗೆ ಸಹಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಆಯುಧ ಪೂಜೆ ನಂತರ ಪೌರ ಕಾರ್ಮಿಕರು, ನೌಕರರಿಗೆ ಸಿಹಿ ವಿತರಿಸಲಾಯಿತು. ನಗರಸಭೆ ಸದಸ್ಯರು, ತಹಶೀಲ್ದಾರ್‌ ಶೋಭಿತಾ, ಆಯುಕ್ತ ಶ್ರೀಕಾಂತ್‌ ಹಾಗೂ ಅಧಿಕಾರಿಗಳು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.