ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೊಳಿಸಿ

ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮನವಿ
Last Updated 22 ಮಾರ್ಚ್ 2021, 16:11 IST
ಅಕ್ಷರ ಗಾತ್ರ

ಕೋಲಾರ: ‘ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿ ಜಾರಿಗೆ ತರುವಂತೆ ರಾಜ್ಯದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವೆಂಕಟೇಶಪ್ಪ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪರಿಶಿಷ್ಟ ಸಮುದಾಯವು ಅನ್ಯಾಯಕ್ಕೆ ಒಳಗಾಗಿದೆ. ರಾಜ್ಯದಲ್ಲಿ ಸದ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಸದನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರವು ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿ ಸರಿಪಡಿಸಿ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಸದಾಶಿವ ಆಯೋಗ ರಚಿಸಿತ್ತು. ಆಯೋಗವು ಗಣತಿ ನಡೆಸಿ ಮಾದಿಗ ಸಮುದಾಯಕ್ಕೆ ಶೇ 6, ಹೊಲೆಯ ಸಮುದಾಯಕ್ಕೆ ಶೇ 5, ಕೊರಮ, ಲಂಬಾಣಿ ಮತ್ತು ಬೋವಿ ಸಮುದಾಯಕ್ಕೆ ಶೇ 3, ಇತರೆ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ’ ಎಂದು ವಿವರಿಸಿದರು.

‘ಸುಪ್ರೀಂ ಕೋರ್ಟ್‌ ನೊಂದ ಜನ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಧ್ವನಿಯಾಗಿದೆ. ವಿಧಾನಸಭೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದರೊಂದಿಗೆ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದ ಮುಂದಿದ್ದ ಅಡೆತಡೆ ನಿವಾರಣೆಯಾಗಿದೆ’ ಎಂದರು.

‘ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯವಾಗಿರುವ ಸಮುದಾಯಗಳಿಗೆ 3 ದಶಕದಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾದಿಗ ಸಮಾಜದ ನಾಯಕರು ತತ್ವ ಸಿದ್ದಾಂತ ಹಾಗೂ ಪಕ್ಷ ನಿಷ್ಠೆಗೆ ಬದ್ಧರಾಗಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಆದ್ದರಿಂದ ರಾಜಕೀಯ ಪಕ್ಷಗಳು ತಮ್ಮ ನಿಷ್ಠಾವಂತ ನಾಯಕರ ಮಾತು ಕೇಳುತ್ತಿಲ್ಲ. ಜತೆಗೆ ಸದಾಶಿವ ಆಯೋಗದ ವರದಿ ಜಾರಿ ಮಾಡದೆ ಪರಿಶಿಷ್ಟ ಸಮುದಾಯವನ್ನು ಕಡೆಗಣಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನ ನಷ್ಟ: ‘ಮಾದಿಗ ಸಮುದಾಯಕ್ಕೆ ಸರ್ಕಾರದ ಯೋಜನೆಗಳು ದೊರೆಯದೆ ಸಾವಿರಾರು ಕೋಟಿ ಅನುದಾನ ನಷ್ಟವಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಏಳಿಗೆಯಾಗದೆ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪಕ್ಷಗಳು ಮಾದಿಗ ಸಮಾಜವನ್ನು ಕೇವಲ ಮತ ಬ್ಯಾಂಕ್‌ ಆಗಿ ಮಾಡಿಕೊಂಡಿವೆ. ಮಾದಿಗ ಮತ್ತು ಅದರ ಉಪ ಜಾತಿಗಳಿಗೆ ಶೇ 6ರ ಮೀಸಲಾತಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಸಮಿತಿಯ ಜಿಲ್ಲಾ ಪದಾಧಿಕಾರಿಗಳಾದ ಎಚ್.ನಾಗರಾಜ್, ವಿ.ರಾಜೇಶ್, ಜಯಚಂದ್ರ, ವಿ.ಶ್ರೀನಿವಾಸ್, ನಾರಾಯಣಸ್ವಾಮಿ, ವೆಂಕಟರತ್ನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT