ಮಂಗಳವಾರ, ಅಕ್ಟೋಬರ್ 27, 2020
28 °C
ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಸ್ತರಣಾ ನಿರ್ದೇಶಕ ಗುರುಪ್ರಸಾದ್‌ ಸಲಹೆ

ಜಿಲ್ಲೆಗೆ ಪರಿಸರಸ್ನೇಹಿ ಗೇರು ಬೆಳೆ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೃಷಿ ಚಟುವಟಿಕೆಗಳಿಗೆ ಮಳೆಯನ್ನೇ ಆಶ್ರಯಿಸಿರುವ ಕೋಲಾರ ಜಿಲ್ಲೆಯಲ್ಲಿ ರೈತರು ಪರಿಸರಸ್ನೇಹಿ ಗೇರು (ಗೋಡಂಬಿ) ಬೆಳೆ ಬೆಳೆಯಬಹುದು. ಗೇರು ಬೆಳೆ ಇಲ್ಲಿನ ವಾತಾವರಣಕ್ಕೆ ಸೂಕ್ತ’ ಎಂದು ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಗುರುಪ್ರಸಾದ್‌ ಸಲಹೆ ನೀಡಿದರು.

ಗೋಡಂಬಿ ಬೆಳೆಯ ಆಧುನಿಕ ಬೇಸಾಯ ಕ್ರಮಗಳು ಕುರಿತು ಇಲ್ಲಿ ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿ, ‘ಕಡಿಮೆ ನೀರು ಹಾಗೂ ಬೇಸಿಗೆಯ ಬೇಗೆ ತಾಳಿಕೊಂಡು ಬದುಕುವ ಸಾಮರ್ಥ್ಯ ಗೇರು ಮರಗಳಿಗೆ ಇದೆ. ಕೋಲಾರ ಜಿಲ್ಲೆಯಂತಹ ಬಯಲುಸೀಮೆ ಪ್ರದೇಶದಲ್ಲಿ ನೀಲಗಿರಿ ಮರಗಳಿಗಿಂತ ಗೇರು ಬೆಳೆದು ಹೆಚ್ಚು ಇಳುವರಿ ಪಡೆಯಬಹುದು’ ಎಂದರು.

‘ದೇಶದಲ್ಲಿ ವರ್ಷಕ್ಕೆ ಪ್ರಸ್ತುತ 7 ಲಕ್ಷ ಟನ್ ಗೋಡಂಬಿ ಉತ್ಪಾದನೆ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಟನ್‌ ಉತ್ಪಾದನೆಯ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ನೀರಿಗೆ ಅಭಾವವಿದೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ತೊಂದರೆಗೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಗೇರು ಪರ್ಯಾಯ ಬೆಳೆ. ಹೀಗಾಗಿ ರೈತರು ಗೇರು ಬೆಳೆಯಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ಗೋಡಂಬಿ ಬೆಳೆ ವಿಸ್ತೀರ್ಣ ಮೈದಾನದ ಒಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಗೇರು ಬೆಳೆಯಲ್ಲಿ ತಾಂತ್ರಿಕತೆ ಉಪಯೋಗಿಸಬೇಕು. ಉತ್ತಮ ಬೇಸಾಯ ಕ್ರಮ ಅನುಸರಿಸಿ ಪ್ರತಿ ಗಿಡದ ಇಳುವರಿಯನ್ನು 1,500ರಿಂದ 2 ಸಾವಿರ ಕೆ.ಜಿಗೆ ಹೆಚ್ಚಿಸಬಹುದು’ ಎಂದು ತಿಳಿಸಿದರು.

‘ಮಳೆ ಆಶ್ರಯದಲ್ಲಿ ಯಾವುದೇ ನಿರ್ವಹಣೆ ಇಲ್ಲದೆ 6 ವರ್ಷದ ನಂತರ ಪ್ರತಿ ಗಿಡಕ್ಕೆ ಸುಮಾರು 10 ಕೆ.ಜಿ ಗೇರು ಬೀಜ ಪಡೆಯಬಹುದು. ಗಿಡಗಳಿಗೆ ಸಕಾಲದಲ್ಲಿ ಕೀಟನಾಶಕ ಸಿಂಪಡಿಸಿದರೆ ಮತ್ತೆ ಯಾವುದೇ ನಿರ್ವಹಣೆಯ ಅಗತ್ಯವಿಲ್ಲ. ಸರ್ಕಾರಿ ಜಾಗದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಪರ್ಯಾಯವಾಗಿ ಗೋಡಂಬಿ ಗಿಡಗಳನ್ನು ಬೆಳೆಸಬಹುದು’ ಎಂದು ಹೇಳಿದರು.

ರೈತರ ಜೀವನಾಡಿ: ‘ಗೇರು ಬೆಳೆಯು ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ. ಮಳೆಯಾಶ್ರಿತ ಬೆಳೆಯಾಗಿರುವ ಗೇರು ಬೆಳೆಯು ಅವಿಭಜಿತ ಕೋಲಾರ ಜಿಲ್ಲೆಯ ರೈತರ ಜೀವನಾಡಿ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್‌ ಅಭಿಪ್ರಾಯಪಟ್ಟರು.

‘ರೈತರು ಮಾವಿನ ತೋಪುಗಳ ಮಧ್ಯೆ ಗೇರು ಮರ ಬೆಳೆಸಿದ್ದಾರೆ. ಬಹುಪಾಲು ಮಾವು ಬೆಳೆಗಾರರು ಈ ಬೆಳೆ ಬೆಳೆಯುತ್ತಿದ್ದು, ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಗೇರು ಬೀಜಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಳೆಗೆ ಹೆಚ್ಚಿನ ವೆಚ್ಚ ತಗಲುವುದಿಲ್ಲ. ಮರಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದರೆ ಜತೆಗೆ ಕೊಟ್ಟಿಗೆ ಗೊಬ್ಬರ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು’ ಎಂದು ವಿವರಿಸಿದರು.

‘ರೈತರು ಹೆಚ್ಚಾಗಿ ಲಾಭದಾಯಕ ಬೆಳೆಗಳತ್ತ ಗಮನ ಹರಿಸುತ್ತಿರುವುದರಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರು ಸಂಖ್ಯೆ ಕುಸಿಯುತ್ತಿದೆ. ತೋಟಗಾರಿಕೆ ಬೆಳೆಗಳಲ್ಲಿ ಗೇರು ಬೆಳೆ ಪ್ರಮುಖವಾದದ್ದು. ಇದನ್ನು ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು’ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ವಿಜ್ಞಾನಿ ಜ್ಯೋತಿ, ಮಣ್ಣು ವಿಜ್ಞಾನಿ ಎಸ್‌.ಅನಿಲ್‌ಕುಮಾರ್‌ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.